ಮೈಸೂರು: ಮೈಸೂರಿನ ದೇವರಾಜ ಮಾರಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡಗಳನ್ನು ಒಡೆದು ಬೇರೆ ಕಟ್ಟುವುದು ಸರಿ ಯಲ್ಲ,ಇವುಗಳನ್ನು ನಮ್ಮ ಸುಪರ್ದಿಗೆ ಕೊಟ್ಟರೆ ನಾವು ಪಾರಂಪರಿಕ ವಾಗಿಯೇ ಇರುವಂತೆ ಪರಿವರ್ತಿಸುತ್ತೇವೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ ಪುತ್ಥಳಿಯನ್ನು ಚಾಮುಂಡಿ ಬೆಟ್ಟದಲ್ಲಿ ಅನಾವರಣ ಮಾಡಿದ ನಂತರ ಅವರು ಮಾತನಾಡಿದರು.
ಇವುಗಳನ್ನು ಒಡೆದು ಅದೇ ರೀತಿ ಕಟ್ಟಿದರೆ ಸಮಂಜಸ ಅನಿಸಲ್ಲ. ಯಾಕೆಂದರೆ ಪಾರಂಪರಿಕತೆ ಉಳಿಸಿಕೊಳ್ಳಬೇಕು ಅಂತ ಅಂದರೆ ಹಳೆಯದನ್ನೇ ಸಿದ್ಧಪಡಿಸಬೇಕು ಎಂದು ಹೇಳಿದರು.
ತಜ್ಞರ ಸಮಿತಿಯಿಂದ ಎರಡು ಅಭಿಪ್ರಾಯ ಬಂದಿದೆ. ಸರಿಯಾದ ತಜ್ಞರನ್ನು ನೇಮಕ ಮಾಡಿ ಮಾಡೋದಾದರೆ ಆಗತ್ತೆ ಅನ್ನೋ ಭರವಸೆ ಇದೆ. ರಾಜೇಂದ್ರ ವಿಲಾಸ ಕೂಡ ತುಂಬಾ ಶಿಥಿಲಗೊಂಡಿತ್ತು. ಶಿಥಿಲ ಆಗಿದೆ ಅಂತ ಒಡೆಯಲಿಕ್ಕಾಗತ್ತಾ ಎಂದು ಪ್ರಶ್ನಿಸಿದರು.
ಅದನ್ನು ಹೇಗಿದೆ ಹಾಗೇ ಉಳಿಸಿಕೊಳ್ಳಬೇಕೆಂದು ನಾವು ಪ್ರಯತ್ನ ಮಾಡುತ್ತಿದ್ದೇವೆ. ಅದು ಆಗುತ್ತದೆ. ಪ್ರಯತ್ನ ಮಾಡಿದರೆ ಯಾವ ಕೆಲಸವೂ ಆಗಲ್ಲ ಎಂಬುದಿಲ್ಲ ಎಂದರು.
ಪ್ರಯತ್ನ ಮಾಡಬೇಕು ಅಷ್ಟೇ. ಪ್ರಯತ್ನ ಮಾಡುತ್ತೇವೆ ಎಂದರೆ ತುಂಬಾ ಸಂತೋಷ,ಸರ್ಕಾರ ಭರವಸೆ ಕೊಟ್ಟು ನೀವು ಮಾಡಿ ಎಂದು ಹೇಳಿದರೆ ಖಂಡಿತ ನಾವು ಮಾಡಿಸಲು ಸಿದ್ಧರಿದ್ದೇವೆ. ಸರ್ಕಾರ ಮನಸ್ಸು ಮಾಡಬೇಕು ಅಷ್ಟೇ ಎಂದರು.
ನಮ್ಮ ಪೂರ್ವಜರಾದ, ಮಾವನವರಾದ ಜಯಚಾಮರಾಜ ಒಡೆಯರ್ ಅವರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಸಂಕಲ್ಪ ಮಾಡಿಕೊಂಡು ಈ ಕಾರ್ಯಕ್ರಮ ಹೇಳಿದ ಸಮಯಕ್ಕೆ ಸರಿಯಾಗಿ ಅಚ್ಚುಕಟ್ಟಾಗಿ ಮಾಡಿದ್ದಾರೆ. ತುಂಬಾ ಸಂತೋಷ ಎಂದು ರಾಜಮಾತೆ ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಜಿ.ಟಿ.ದೇವೇಗೌಡ, ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ.ಎನ್.ಶಶಿಶೇಖರ ದೀಕ್ಷಿತ್, ಚಾಮುಂಡಿಬೆಟ್ಟ ಗ್ರಾ.ಪಂ.ಅಧ್ಯಕ್ಷ ಭರತ್ ಕಾಳಯ್ಯ, ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಯತಿರಾಜ್ ಸಂಪತ್ ಕುಮಾರ್, ಸಹಾಯಕ ಅಭಿಯಂತರ ರಘು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಾಮುಂಡಿ ಬೆಟ್ಟದ ಪೊಲೀಸ್ ಉಪಠಾಣೆ ಮತ್ತು ಗ್ರಾಮಪಂಚಾಯತ್ ಎದುರು ಇರುವ ಉದ್ಯಾನವನದಲ್ಲಿ ಸ್ಥಾಪಿಸಿರುವ ಪುತ್ಥಳಿಯನ್ನು ಗ್ರಾಮಪಂಚಾಯತ್ ಅಧ್ಯಕ್ಷ ಭರತ್ ಕಾಳಯ್ಯ ಅವರ ಕಾಳಜಿಯಿಂದ ಗ್ರಾಮಸ್ಥರು ಹಾಗೂ ಮಹಾರಾಜರ ಅಭಿಮಾನಿಗಳು 2.30ಲಕ್ಷರೂ.ವೆಚ್ಚದಲ್ಲಿ ನಿರ್ಮಿಸಿದ್ದಾರೆ.
ವೇದಿಕೆ, ಕಬ್ಬಿಣದ ಗ್ರಿಲ್, ಉದ್ಯಾನ ಅಭಿವೃದ್ಧಿ ಸೇರಿ ಒಟ್ಟು 8ಲಕ್ಷರೂ.ವೆಚ್ಚವಾಗಿದೆ. 3.5ಅಡಿ ಎತ್ತರ, 3ಅಡಿ ಸುತ್ತಳತೆಯ ಶ್ರೀ ಜಯಚಾಮರಾಜೇಂದ್ರ ಪುತ್ಥಳಿಯನ್ನು ಶಿಲ್ಪಿ ಸೂರ್ಯಪ್ರಕಾಶ್ ಕೆತ್ತಿದ್ದು ಆಕರ್ಷಕವಾಗಿದ್ದು ನೋಡುಗರ ಮನಸೆಳೆಯುತ್ತಿದೆ.

