ಕಲಬುರಗಿ: ಮಸೀದಿಗಳಲ್ಲಿ ಆಜಾನ್ ಕುರಿತಾಗಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನೀಡಿರುವ ಆದೇಶದಂತೆ ಕಾನೂನು ಪಾಲನೆ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಮಸೀದಿಗಳಲ್ಲಿ ಆಜಾನ್ ಮಾಡುವ ವೇಳೆ ಮೈಕ್‍ಗಳಿಗೆ ಎಷ್ಟುಪ್ರಮಾಣದ ಡೆಸಿಬಲ್ ಅಳವಡಿಸಬೇಕೆಂದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಸ್ಪಷ್ಟವಾದ ಆದೇಶ ನೀಡಿದೆ ಎಂದು ಹೇಳಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜೊತೆ ಮಾತುಕತೆ ನಡೆಸಿ ಮಸೀದಿಗಳಲ್ಲಿ ಮೈಕ್ ಅಳವಡಿಸುವ ಸಂಬಂಧ ಸುತ್ತೋಲೆ ಹೊರಡಿಸಲು ಸೂಚನೆ ನೀಡಲಾಗಿತ್ತು.
ಅದರಂತೆ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸುತ್ತೋಲೆ ಹೊರಡಿಸಿ ಆಯಾ ಧರ್ಮಗಳ ಧಾರ್ಮಿಕ ಮುಖಂಡರ ಜೊತೆ ಮಾತುಕತೆ ನಡೆಸಲಾಗಿದೆ. ಸೌಹಾರ್ದಯುತವಾದ ವಾತಾವರಣವನ್ನು ಮೂಡಿಸಿಕೊಂಡು ಹೋಗುವಂತೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಎಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿ ಪಕ್ಷವನ್ನು ಸಂಘಟಿಸಲಿದ್ದೇವೆ. ನಮ್ಮಲ್ಲಿ ಗೊಂದಲಗಳಿಲ್ಲ ಎಂದು ಇದೇ ವೇಳೆ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರು ನಾಮಕರಣ ಮಾಡುವ ಕುರಿತು ವಿರೋಧ ವ್ಯಕ್ತವಾಗಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಚರ್ಚಿಸಿಯೇ ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.

