ಬೆಂಗಳೂರು: ಕಾಂಗ್ರೆಸ್ ನಾಯಕರು, ತನಿಖೆಗೆ ಸಹಕರಿಸಬೇಕು ಹಾಗೂ, ಯಾವುದೇ ರಾಜಕೀಯ ಲಾಭ ಅಪೇಕ್ಷೆ ಮಾಡದೆ ಅಕ್ರಮ ಎಸಗಿದವರನ್ನು ಕಾನೂನಿನ ಬಲೆಗೆ ತರಲು ಮುಂದಾಗಬೇಕು ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಹೇಳಿದ್ದಾರೆ.
PSI ಹುದ್ದೆಗಳ ಅಕ್ರಮ ನೇಮಕಾತಿ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಅಪ್ತರನ್ನು ಬಂಧಿಸಿದ್ದಾರೆ.
ಅಕ್ರಮಕ್ಕೆ ಸಂಬಂಧಿಸಿದಂತೆ ಒಂದು ತಿಂಗಳ ಹಿಂದೆಯೇ ತಮಗೆ ಸಲ್ಲಿಕೆ ಯಾಗಿದೆ ಎನ್ನಲಾದ ಆಡಿಯೋ ರೆಕಾರ್ಡ್ ಅನ್ನು ಪ್ರಿಯಾಂಕ ಖರ್ಗೆಯವರು ಈಗ ಬಿಡುಗಡೆ ಮಾಡಿದ್ದಾರೆ.
ನಂತರ ಖರ್ಗೆಯವರು ಈ ಕುರಿತು ಪತ್ರಿಕಾ ಗೋಷ್ಟಿ ಸಹ ನಡೆಸಿದ್ದರು, ಆದರೆ ಆಡಿಯೋ ರೆಕಾರ್ಡ್ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈಗ ಅವರ ಆಪ್ತರು ಬಂಧನವಾಗುತ್ತಿದ್ದಂತೆ ಮಾಹಿತಿ ಹೊರ ಹಾಕಿದ್ದಾರೆ ಇದು ಎಷ್ಟು ಸರಿ ಎಂದು ಗೃಹ ಸಚಿವರು ಪ್ರಶ್ನಿಸಿದ್ದಾರೆ.
ಇಷ್ಟು ದಿನಗಳು ಏಕೆ ಸಾಕ್ಷ್ಯವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು ಎಂದು ಸಾರ್ವಜನಿಕರಿಗೆ ತಿಳಿಸಬೇಕು. ತಮ್ಮ ಬೆಂಬಲಿಗರು ಸಿಐಡಿ ತನಿಖೆಯಲ್ಲಿ ಸಿಕ್ಕಿ ಬೀಳುವುದಿಲ್ಲ ಎಂಬ ಹುಸಿ ನಂಬಿಕೆಯಿಂದಲೆ ಎಂದು ಪ್ರಶ್ನಿಸಿದ್ದಾರೆ.
ಈಗಲಾದರೂ, ಖರ್ಗೆಯವರು ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳಿಗೆ ತಮ್ಮ ಬಳಿಯಿರುವ ದಾಖಲೆ ಹಾಗೂ ಮಾಹಿತಿಯನ್ನು ಹಂಚಿಕೊಳ್ಳಬೇಕು ತಮ್ಮ ಹೊಣೆಗಾರಿಕೆಯನ್ನು ಅರಿಯಬೇಕು ಎಂದು ಆರಗ ಜ್ಞಾನೇಂದ್ರ ಕೋರಿದ್ದಾರೆ.
ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು ಅಕ್ರಮದಲ್ಲಿ ಒಳಗಾದವರು ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ
ಕಾಂಗ್ರೆಸ್ ನಾಯಕರು ತನಿಖೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

