ಹುಬ್ಬಳ್ಳಿ: ಕೇರಳ ಮತ್ತಿತರೆಡೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏ. 27ರಂದು ಪ್ರಧಾನ ಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆಗಳನ್ನು ನೀಡಲಿದ್ದು, ನಂತರ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಹಿಂದಿನ ಅನುಭವಗಳನ್ನು ಆಧರಿಸಿ ಕೋವಿಡ್ ನಿರ್ವಹಣೆಗೆ ಸ್ಪಷ್ಟ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು.
ವಿಜ್ಞಾನಿಗಳು,ತಜ್ಞರ ಸಲಹೆಗಳನ್ನು ಪಡೆಯುತ್ತೇವೆ.ಏ.27 ರ ನಂತರ ಕೋವಿಡ್ ಮಾರ್ಗಸೂಚಿ ಸಿದ್ಧಪಡಿಸಲಾಗುವುದು ಎಂದು ಸಿಎಂ ಹೇಳಿದರು.
ದೇಶ, ರಾಜ್ಯದಲ್ಲಿಯೇ ಕುಳಿತು ಬೇರೆ ದೇಶಗಳ ವಿಳಾಸ ನೀಡಿ ಆತಂಕ ಒಡ್ಡುವ ಕೃತ್ಯಗಳನ್ನು ಯೋಜಿಸುವವರ ವಿರುದ್ಧ ತನಿಖೆ ಮಾಡಿ, ಖಚಿತ ಮಾರ್ಗಗಳ ಮೂಲಕ ಪತ್ತೆ ಮಾಡಲಾಗುವುದು ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದರು.
ಕೇಂದ್ರ ಸರ್ಕಾರದ ಮೂಲಕ ವಿದೇಶಗಳ ಭದ್ರತಾ ವಿಭಾಗ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗುವುದು. ಪೂರ್ಣ ಪ್ರಮಾಣದ ತನಿಖೆ ಕೈಗೊಂಡು ಇಮೇಲ್ ಮೂಲ ಪತ್ತೆ ಮಾಡಲಾಗುವುದು ಎಂದು ಹೇಳಿದರು.
ಪಿಎಸ್‌ಐ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿರುವವರು ಯಾರೇ ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

