ಬೆಂಗಳೂರು: ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆಗೆ ಸೂಚನೆ ನೀಡುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮೇಲೆ ನಿಗಾವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆ ನಡೆಸುವಂತೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಎಲ್ಲ ಬಿಇಒಗಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಸರ್ಕಾರದ ನೀತಿ-ನಿಯಮಗಳಿಗೆ ವಿರುದ್ಧವಾಗಿ ಪಠ್ಯಕ್ರಮಗಳಿದ್ದರೆ ಖಂಡಿತಾ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ಕೊಟ್ಟರು.
ವಿದ್ಯಾರ್ಥಿಗಳ ಪ್ರವೇಶಾತಿ ವೇಳೆ ಬೈಬಲ್ ಓದಲು ಒಪ್ಪಿಗೆ ಇದೆಯೇ ಎಂದು ಕೇಳುತ್ತಾರೆ. ಕೆಲವು ಶಿಕ್ಷಣ ಸಂಸ್ಥೆಗಳು ಒಪ್ಪಿಗೆ ಕೊಟ್ಟ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾತಿ ಕೊಡುತ್ತಾರೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆ ಎಂದು ಸಚಿವರು ಹೇಳಿದರು.
ಒಂದು ವೇಳೆ ಬೈಬಲ್ ಓದಲು ನಿರಾಕರಿಸಿದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡುವುದಿಲ್ಲ. ಬೇರೆ ಸಂದರ್ಭಗಳಲ್ಲಿ ಮಾತನಾಡುವ ವಿರೋಧ ಪಕ್ಷಗಳು ಈಗ ಏಕೆ ಮಾತನಾಡುವುದಿಲ್ಲ ಎಂದು ನಗೇಶ್ ಪ್ರಶ್ನಿಸಿದರು.
ಜೂನ್ – ಜುಲೈ ತಿಂಗಳಿನಲ್ಲಿ ಕೋವಿಡ್ ನಾಲ್ಕನೆ ಅಲೆ ಬರಬಹುದೆಂದು ಹೇಳಲಾಗುತ್ತಿದೆ,ಆದರೂ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಈಗಾಗಲೇ ನಿಗದಿಯಾಗಿರುವಂತೆ ಮೇ 16ರಿಂದ ಆರಂಭವಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಅನ್ನು ಕಡ್ಡಾಯವಾಗಿ ಓದಬೇಕೆಂಬ ಶಾಲಾ ಆಡಳಿತ ಮಂಡಳಿ ಮಾಡಿರುವ ನಿಯಮಗಳ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ಇದು ಕರ್ನಾಟಕ ಶಿಕ್ಷಣ ಕಾಯ್ದೆಯ ವಿರುದ್ಧವಾಗಿದೆ. ಹೀಗಾಗಿ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ ಎಂದರು.

