ಮೈಸೂರು: ರಂಜಾನ್ ಪ್ರಾರ್ಥನೆ ಮುಗಿಸಿ ವಾಪಸಾಗುವಾಗ ಕೌಲಂದೆ ಛೋಟಾ ಪಾಕಿಸ್ತಾನ ಎಂಬಂತೆ ಬಿಂಬಿಸಿದ್ದ ಆಡಿಯೊ-ವೀಡಿಯೋ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನಾನ್ ಖಾನ್ ಹಾಗೂ ಫಯಾಜ್ ಷರೀಫ್ ಎಂಬವರನ್ನು ಕವಲಂದೆ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.
ನಂಜನಗೂಡು ತಾಲ್ಲೂಕಿನ ಕೌಲಂದೆಯಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ಮಸ್ಲಿಮರು ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಮೆರವಣಿಗೆಯಲ್ಲಿ ತೆರಳಿದ್ದರು.
ನಂತರ ಮೆರವಣಿಗೆ ವಾಪಸಾಗುವಾಗ ಒಂದಿಬ್ಬರು ವಿಡಿಯೋ ಮಾಡುತ್ತಿದ್ದರು, ಇದೇ ವೇಳೆ ಆಡಿಯೋ ಕೂಡಾ ಕೇಳಿಸಿದ್ದು ಕೌಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ ಎಂದು ವ್ಯಕ್ತಿ ಕರ್ಕಶವಾಗಿ ಕೂಗಿದ್ದು ಕೇಳಿಸಿದೆ.
ಈ ವಿಡಿಯೋ, ಆಡಿಯೋ ಭಾರಿ ವೈರಲ್ ಆಗಿತ್ತು.ತಕ್ಷಣ ಹಿಂದೂಪರ ಸಂಘಟನೆಗಳು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದವು.ಅಲ್ಲದೆ ಆಡಿಯೋ,ವಿಡಿಯೋ ಬಿಡುಗಡೆಗೆ ಕಾರಣರಾದವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು.
ಮತ್ತೆ ಧಾರ್ಮಿಕ ಸಂಘರ್ಷ ಉಂಟಾಗಬಾರದೆಂಬ ಕಾರಣಕ್ಕೆ ಕವಲಂದೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಜತೆಗೆ ಕೆಎಸ್ ಆರ್ ಪಿ ತುಕುಡಿಯನ್ನು ಹಾಕಲಾಗಿದೆ.
ಕವಲಂದೆಯಲ್ಲಿ ಹಿಂದು,ಮುಸ್ಲಿಮರು ಸಹೋದರರಂತೆ ಜೀವಿಸುತ್ತಿದ್ದಾರೆ.ಇಂತಹ ಕೆಟ್ಟ ಘಟನೆಗಳು ನಡೆದಿರಲಿಲ್ಲ ಎಂದು ಎರಡೂ ಧರ್ಮದ ಮುಖಂಡರು ಹೇಳಿದ್ದರು.
ಇದೀಗ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಮತ್ತೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕೆಂಬುದು ಕವಲಂದೆ ಜನರ ಆಶಯವಾಗಿದೆ.

