ಕಲಬುರಗಿ: ಕಾಂಗ್ರೆಸ್ನವರು ಆರೋಪ ಮಾಡ್ತಾರೆ, ದಾಖಲಾತಿ ಕೇಳಿದ ತಕ್ಷಣ ಪಲಾಯನ ಮಾಡ್ತಾರೆ ಎಂದು
ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಟ್ರೂ ಹಾಜರಾಗುತ್ತಿಲ್ಲ ಎಂದು ಟೀಕಿಸಿದರು.
ತನಿಖೆ ಸರಿಯಾಗಿ ನಡೆದರೆ ಎಲ್ಲಿ ತಮ್ಮ ಬುಡಕ್ಕೆ ಬರುತ್ತೋ ಎಂದುಕೊಂಡು ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ದೂರಿದರು.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 300 ಕೋಟಿ ರೂ ಅಕ್ರಮ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಆರಗ ತಿರುಗೇಟು ನೀಡಿದರು.
ಸಿದ್ದರಾಮಯ್ಯ 300 ಕೋಟಿ ಅಲ್ಲ 3,000 ಕೋಟಿ ಆರೋಪ ಮಾಡ್ಲಿ, ಮಾತಾಡೋಕೆ ಅವರಿಗೆ ವಾಕ್ ಸ್ವಾತಂತ್ರ್ಯ ಇದೆ. ನಿರಾಧಾರವಾಗಿ ಆರೋಪ ಮಾಡೋದು, ದಾಖಲಾತಿ ಕೇಳಿದ್ರೆ ಓಡಿಹೋಗೋದು ಕಾಂಗ್ರೆಸ್ ನವರ ಕೆಲಸ ಎಂದು ವ್ಯಂಗ್ಯ ವಾಡಿದರು.
ಪ್ರಕರಣದಲ್ಲಿ ಸಿಲುಕಿದವರು ಬಹುತೇಕರು ಕಾಂಗ್ರೆಸ್ನವರೇ ಎಂದರು.
ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಅಕ್ರಮದಲ್ಲಿ ಕೈ ಹಾಕಿರುವವರು ಮತ್ತೆ ಹೀಗೆ ಮಾಡಬಾರದು ಹಾಗೆ ಮಾಡ್ತೀವಿ ಎಂದು ಗೃಹ ಸಚಿವರು ಕಡಕ್ಕಾಗಿ ಹೇಳಿದರು.

