ಬಿಜೆಪಿ ನಾಯಕರ ರಕ್ಷಣೆಗೆ ಸಿಐಡಿಯಿಂದ ತನಿಖೆ -ಭಾಸ್ಕರ್ ರಾವ್ ಆರೋಪ

ಬೆಂಗಳೂರು: ಸತ್ಯ ಹೊರಬರುವುದನ್ನು ತಡೆಯುವ ಹುನ್ನಾರದಿಂದ ಪಿಎಸ್‌ಐ ನೇಮಕಾತಿ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಆಮ್‌ ಆದ್ಮಿ ಪಾರ್ಟಿ ಮುಖಂಡ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಹೇಳಿದರು.

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರೇ ಆರೋಪಿಗಳಾಗಿರುವ ಹಗರಣವನ್ನು ಬಿಜೆಪಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಐಡಿಯಿಂದಲೇ ತನಿಖೆ ಮಾಡಿಸುವುದು ಹಾಸ್ಯಾಸ್ಪದ ಎಂದು ಹೇಳಿದರು.

ಈ ತನಿಖೆಗೆ ಯಾವ ಬೆಲೆಯೂ ಇಲ್ಲ, ಅನುಮಾನಾಸ್ಪದ ಅಭ್ಯರ್ಥಿಯ ತನಿಖೆ ವೇಳೆ ಬಿಜೆಪಿ ನಾಯಕರ ಹೆಸರು ಕೇಳಿಬಂದರೆ, ಆ ಅಭ್ಯರ್ಥಿಯ ವಿಚಾರಣೆಯನ್ನೇ ಕೈಬಿಡಲಾಗುತ್ತಿದೆ ಎಂದು‌ಅವರು ದೂರಿದರು.

ಇಡೀ ಹಗರಣವನ್ನು ಮುಚ್ಚಿ ಹಾಕಿ, ಬಿಜೆಪಿ ನಾಯಕರನ್ನು ಬಚಾವ್‌ ಮಾಡಲೆಂದೇ ಸಿಐಡಿ ಮೂಲಕ ತನಿಖೆ ನಡೆಸಲಾಗುತ್ತಿದೆ ಎಂದು ಭಾಸ್ಕರ ‌ರಾವ್ ಆರೋಪಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯವರ ಮೇಲ್ವಿಚಾರಣೆಯಲ್ಲಿ ಪಿಎಸ್‌ಐ ಹಗರಣದ ಸಮಗ್ರ ತನಿಖೆ ನಡೆಯಬೇಕು ಆಗ ಮಾತ್ರ ನಿಷ್ಪಕ್ಷಪಾತ ತನಿಖೆ ನಡೆದು, ಸತ್ಯಾಂಶ ಹೊರಬರುತ್ತದೆ‌ ಎಂದು ತಿಳಿಸಿದರು.

ಹೀಗಾದಾಗ ಅಕ್ರಮದಲ್ಲಿ ಭಾಗಿಯಾದ ಎಲ್ಲ ರಾಜಕಾರಣಿಗಳ ಮುಖವಾಡ ಕಳಚಿ ಬೀಳುತ್ತದೆ. ಇಲ್ಲದಿದ್ದರೆ, ಸಿಐಡಿ ತನಿಖೆಯ ಗಾಳಕ್ಕೆ ಕೇವಲ ಸಣ್ಣಪುಟ್ಟ ಮೀನುಗಳು ಬಲಿಯಾಗಿ, ದೊಡ್ಡ ತಿಮಿಂಗಿಲಗಳು ತಪ್ಪಿಸಿಕೊಳ್ಳುತ್ತವೆ ಎಂದು ಹೇಳಿದರು.

ಸಚಿವ ಡಾ. ಅಶ್ವತ್ಥ್‌ ನಾರಾಯಣ್‌ ಅವರ ಸಹೋದರನೇ ಹಗರಣದಲ್ಲಿ ಭಾಗಿಯಾಗಿರುವ ಆರೋಪವಿದೆ. ಸಚಿವರ ಸಹಕಾರವಿಲ್ಲದೇ ಅವರ ಸಹೋದರನಿಗೆ ಅಕ್ರಮವೆಸಗಲು ಸಾಧ್ಯವೇ ಎಂದು ಭಾಸ್ಕರ್‌ ರಾವ್‌ ಪ್ರಶ್ನಿಸಿದರು.

ಬಹುತೇಕ ಬಿಡಿಎ ಕಾಮಗಾರಿಗಳನ್ನು ಅಶ್ವತ್ಥ್‌ ನಾರಾಯಣ್‌ ಸಹೋದರರ ಮಾಲೀಕತ್ವದ ಹೊಂಬಾಳೆ ಕನ್‌ಸ್ಟ್ರಕ್ಷನ್‌ ನಿರ್ವಹಿಸುತ್ತಿದ್ದು, ಪಿಎಸ್‌ಐ ನೇಮಕಾತಿಯಲ್ಲೂ ಅವರು ಮೂಗು ತೂರಿಸಿರುವುದು ಆತಂಕಕಾರಿಯಾಗಿದೆ ಎಂದರು.

ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆಯವರಿಗೆ ಸಿಐಡಿ ಮೂರು ನೋಟಿಸ್‌ ನೀಡಿದರೂ ಅವರು ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಒದಗಿಸಿಲ್ಲ. ಸತ್ಯ ಹೊರಬರುವುದು ಕಾಂಗ್ರೆಸ್‌ಗೂ ಇಷ್ಟವಿಲ್ಲ ಎನ್ನುವುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರನು ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ಮಾಡಿದ್ದಾರೆಂದು ವಕೀಲ ನಿಯೋಗವು ಸಿಐಡಿಗೆ ದೂರು ನೀಡಿದೆ. ಆ ಮುಖ್ಯಮಂತ್ರಿ ಹಾಗೂ ಅವರ ಮಗ ಯಾರೆಂದು ಬಹಿರಂಗವಾಗಬೇಕು ಎಂದು ಭಾಸ್ಕರ್ ರಾವ್ ಒತ್ತಾಯಿಸಿದರು.