ನಾನು ತಪ್ಪು ಮಾಡಿಲ್ಲ; ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದೆ -ಡಿ.ಕೆ.ಶಿ

ಬೆಂಗಳೂರು: ನಾನು ತಪ್ಪು ಮಾಡಿಲ್ಲ; ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನ ಸದಾಶಿವನಗರದಲ್ಲಿ ತಮ್ಮ ನಿವಾಸದ ಬಳಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಇದೊಂದು ರಾಜಕೀಯ ಷಡ್ಯಂತ್ರ. ಜಾರಿ ನಿರ್ದೇಶನಾಲಯ ನನ್ನ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ ಎಂಬ ಮಾಹಿತಿ ಮಾಧ್ಯಮಗಳ ಮೂಲಕ ತಿಳಿದಿದೆ. ನನಗೆ ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನನ್ನನ್ನು ಬಂಧಿಸಿದ 60 ದಿನಗಳ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಅವರು ಸರಿಯಾದ ಸಮಯಕ್ಕೆ ಆರೋಪಪಟ್ಟಿ ಸಲ್ಲಿಸದ ಕಾರಣ ನನಗೆ ಜಾಮೀನು ದೊರೆತಿತ್ತು. ಆದರೆ ಮೂರು ವರ್ಷಗಳ ನಂತರ ಸಲ್ಲಿಸುತ್ತಿದ್ದಾರೆ. ನನಗೆ ಇನ್ನು ಅದರ ಪ್ರತಿ ಸಿಕ್ಕಿಲ್ಲವೆಂದರು.

ಇದೊಂದು ರಾಜಕೀಯ ಷಡ್ಯಂತ್ರದ ಪ್ರಕರಣ. ಅಹ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಿದೆ ಎಂಬ ಕಾರಣಕ್ಕೆ ನನ್ನ ಹಾಗೂ ನನ್ನ ಸ್ನೇಹಿತರ ಮೇಲೆ ದಾಳಿ ಮಾಡಿ, ಅವರ ಹಣವನ್ನೂ ನನ್ನ ಹಣ ಎಂದು ಬರೆದಿದ್ದಾರೆ ಎಂದರು.

ಬಿಜೆಪಿವರು ಅವರ ಪಕ್ಷದವರನ್ನೇ ಬಿಡುತ್ತಿಲ್ಲ, ಇನ್ನು ನನ್ನನ್ನು ಬಿಡುತ್ತಾರೆಯೇ? ಅವರ ರಾಜಕೀಯ ಹಾದಿಗೆ ಅಡ್ಡಿಯಾಗಿರುವವರನ್ನು ನಿರ್ಮೂಲನೆ ಮಾಡಲು ಹೊರಟಿದ್ದಾರೆ. ಅವರಿಗೆ ಶರಣಾಗಬೇಕು, ಇಲ್ಲದಿದ್ದರೆ ಅಂತಹವರನ್ನು ಮುಗಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಪಿತೂರಿ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ, ಅವರು ಉತ್ತರಿಸಿ, ಈ ವಿಚಾರ ನಿಮ್ಮೆಲ್ಲರಿಗೂ ತಿಳಿದಿದೆ. ಇದು ಬಿಜೆಪಿ ಸರ್ಕಾರದ ಕಾರ್ಯವೈಖರಿ. ಅವರು ಎಲ್ಲ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.