ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಬೋನ್ಸಾಯ್ ಗಾರ್ಡನ್ ಅಂತಹುದು ನಮ್ಮ ಭಾರತ ದೇಶದಲ್ಲಿ ಎಲ್ಲೂ ಇಲ್ಲ ಎಂದು ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದೀಬೇನ್ ಪಟೇಲ್ ಬಣ್ಣಿಸಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೆ ಜನ್ಮದಿನೋತ್ಸವದ ಪ್ರಯುಕ್ತ ಶ್ರೀಗಳಿಗೆ ಶುಭಕಾಮನೆ ಸಲ್ಲಿಸಿ, ಇಂದಿನ ಚೈತನ್ಯಾರ್ಚನೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನಾದನಿಧಿ ಪ್ರಶಸ್ತಿ ಪ್ರದಾನ ಮಾಡಿ,ಅವರು ಮಾತನಾಡಿದರು.
ಇಲ್ಲಿರುವ ಬೋನ್ಸಾಯ್ ಗಾರ್ಡನ್ ನಿಂದ ಪ್ರೇರಣೆ ಗೊಂಡು ಲಕನೌಗೆ ತೆರಳಿದ ಕೂಡಲೇ ನಮ್ಮ ರಾಜಭವನದಲ್ಲೂ ಬೋನ್ಸಾಯ್ ಗಾರ್ಡನ್ ಮಾಡುತ್ತಿದ್ದೇವೆ ಎಂದು ಉತ್ತರ ಪ್ರದೇಶ ರಾಜ್ಯಪಾಲರು ತಿಳಿಸಿದರು.
ಶ್ರೀಗಳು ಆಧ್ಯಾತ್ಮಿಕ ಮಾರ್ಗದರ್ಶನದಿಂದ ಜನರ ಜೀವನವನ್ನು ಉದ್ದಾರ ಮಾಡುತ್ತಿದ್ದಾರೆ. ಅವರು ಪರಿಸರವನ್ನು ಸಂರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಗಣಪತಿ ಶ್ರೀಗಳು ಇಡೀ ವಿಶ್ವದಲ್ಲಿ ಯೋಗ, ಪ್ರವಚನ ಹಾಗೂ ಸಂಗೀತದಿಂದ ಭಾರತದ ಹೆಸರನ್ನು ಪ್ರಸಿದ್ಧಿ ಪಡಿಸಿದ್ದಾರೆ ಎಂದು ತಿಳಿಸಿ,ಶ್ರೀಗಳ ಪರಿಸರ ಪ್ರೇಮ ನನಗೆ ಬಹಳ ಮೆಚ್ಚುಗೆಯಾಯಿತು ಎಂದು ಹೇಳಿದರು.
ಮೈಸೂರಿನ ಅಧ್ಬುತ ಅರಮನೆ ಹೊರತುಪಡಿಸಿ ಬೇರೆ ಇನ್ನೇನು ನೋಡುವಂತಹ ಸ್ಥಳಗಳಿವೆ ಎಂದು ಹುಡುಕುತ್ತಿದ್ದಾಗ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಇರುವುದು ತಿಳಿಯಿತು ನಾವು ಇಲ್ಲಿಗೆ ಆಗಮಿಸಿದೆವು. ನಾವು ಇಲ್ಲಿಗೆ ಬಂದಾಗ ಅದ್ಭುತ ಅನುಭವ ಆಯಿತು ಎಂದು ಆನಂದೀಬೇನ್ ಸ್ಮರಿಸಿದರು.
ಇಲ್ಲಿನ ಶಾಂತ ವಾತಾವರಣ,ಶುಖವನ, ಬೋನ್ಸಾಯ್ ಗಾರ್ಡನ್, ನಾದಮಂಟಪ ನಿಜಕ್ಕೂ ಅದ್ಬುತ ಎಂದು ತಿಳಿಸಿದರು.
ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಶುಖವನದಲ್ಲಿ ಪ್ರಪಂಚದ ಬೇರೆಬೇರೆ ಕಡೆಯ ನೂರಾರು ಪಕ್ಷಿಗಳು, ಗಿಳಿಗಳಿವೆ. ಗಿಳಿಗಳು ನಮಗೆ ಸ್ವಾಗತ ಕೋರಿದುದನ್ನು ಕಂಡು ಅಚ್ಚರಿಯಾಯಿತು. ಇಂತಹ ಪಕ್ಷಿಪ್ರೇಮವನ್ನು ನನ್ನ ಜೀವನದಲ್ಲಿ ಎಲ್ಲೂ ನೋಡಿರಲಿಲ್ಲ ಎಂದು ಆನಂದಿಂದ ಆನಂದೀಬೇನ್ ಹೇಳಿದರು.
ಯಾರಿಗೆ ಶಾಂತಿ, ನೆಮ್ಮದಿ ಬೇಕೋ ಅಂಥವರು ಈ ಆಶ್ರಮದಲ್ಲಿರುವ ಶ್ರೀ ವೆಂಕಟೇಶ್ವರ ಸನ್ನಧಿ ಹಾಗೂ ದತ್ತಕ್ಷೇತ್ರಕ್ಕೆ ಬರಬೇಕು ಎಂದು ತಿಳಿಸಿದರು.
ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಜೀವನ ಇಂದಿಗೂ ಮೇಳೈಸುತ್ತಿರುವುದು ಶ್ರೀ ಗಣಪತಿ ಸ್ವಾಮೀಜಿಯವರಂತವರಿಂದ ಎಂದು ಆನಂದೀಬೇನ್ ಪಟೇಲ್ ತಿಳಿಸಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಸಂಗೀತ ಸಂಜೀವಿನಿ ಇದ್ದ ಹಾಗೆ ಎಲ್ಲರೂ ಸಂಗೀತ ಅಭ್ಯಾಸ ಮಾಡಬೇಕೆಂದು ಕರೆ ನೀಡಿದರು.
ಇಂದು ಸನ್ಮಾನಿತರಾದ ಸಂಗೀತ ವಿದ್ವಾಂಸರ ಕಲೆಯನ್ನು ಶ್ರೀಗಳು ಕೊಂಡಾಡಿದರು. ನಮ್ಮ ನಾಡಲ್ಲಿ ಸುಪ್ರಸಿದ್ಧ ಸಂಗೀತ ವಿದ್ವಾಂಸರು ಇದ್ದಾರೆ. ನಾನು ಕೂಡಾ ಅವರಿಂದ ಪ್ರೇರೇಪಿತನಾಗಿದ್ದೇನೆ ಎಂದು ತಿಳಿಸಿದರು.
ಎಲ್ಲರೂ ಸಂಸ್ಕೃತ ಭಾಷೆಯನ್ನು ಕಲಿಯಬೇಕೆಂದು ಶ್ರೀಗಳು ಪುನರುಚ್ಚರಿಸಿದರು.
ಇನ್ನು ಮುಂದೆ ನಮ್ಮ ಆಶ್ರಮದಲ್ಲಿ ಎಲ್ಲರೂ ಸಂಸ್ಕೃತ ಭಾಷೆಯಲ್ಲಿ ಮಾತನಾಡಲು ನಿರ್ಧರಿಸಿದ್ದೇವೆ ಎಂದು ಗಣಪತಿ ಶ್ರೀಗಳು ತಿಳಿಸಿದರು.
ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಉಪಸ್ಥಿತರಿದ್ದರು

