ಮೈಸೂರು: ಸಿದ್ದರಾಮಯ್ಯ ಅವರಿಗೆ ರಿಯಾಕ್ಟ್ ಮಾಡಲು ಬೇರೆ ವಿಚಾರಗಳಿಲ್ಲ, ಸದಾ ಆರ್ ಎಸ್ ಎಸ್ ಮಾತ್ರ ಕಾಣಿಸುತ್ತಿದೆ. ಹಾಗಾಗಿ ಇದನ್ನೇ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.
ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದೆರಡು ದಿನಗಳಿಂದ ಕುಮಾರಸ್ವಾಮಿ ವರ್ಸಸ್ ಸಿದ್ದರಾಮಯ್ಯ ಅಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವ ಭೀತಿ ಇದೆ. ಹಾಗಾಗಿ ಸಿದ್ದರಾಮಯ್ಯಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಪದೇ ಪದೇ ಡೆಲ್ಲಿಗೆ ಹೋಗ್ತಾರೆ.ಇಲ್ಲಿ ಬಂದು ಡಿಕೆಶಿ ಜೊತೆ ಕುಸ್ತಿ ಮಾಡ್ತಾರೆ. ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.
ಬ್ರಿಜೇಶ್ ಕಾಳಪ್ಪರಂತ ನಾಯಕ ಕಾಂಗ್ರೆಸ್ ಗೆ ರಾಜಿನಾಮೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೀನಾಯವಾಗಿದೆ ಹಾಗಾಗಿ ಅವರ ಟ್ವೀಟ್ ಗಳಿಗೆ ಉತ್ತರ ಕೊಡದಿರುವುದೇ ಲೇಸು ಎಂದರು.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮೈ.ವಿ.ರವಿಶಂಕರ್ ಗೆಲುವು ಸಾಧಿಸಲಿದ್ದಾರೆ
ಎಂದು ಸದಾನಂದಗೌಡ ಇದೇ ವೇಳೆ ತಿಳಿಸಿದರು.
ಈ ಬಾರಿ ಬಿಜೆಪಿಗೆ ಪ್ರತಿಸ್ಪರ್ಧಿಗಳೇ ಇಲ್ಲ ಹಾಗಾಗಿ ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸಾಹಿತಿಗಳ ನಡೆಗೆ ಬೇಸರ ವ್ಯಕ್ತಪಡಿಸಿದ ಡಿ.ವಿ ಸದಾನಂದಗೌಡ, ಪಠ್ಯ ಪುಸ್ತಕದಲ್ಲಿ ಏನಾದರೂ ತಪ್ಪುಗಳಿದ್ದರೆ ಹೇಳಲಿ ಅದನ್ನು ಸರಿಪಡಿಸುತ್ತೇವೆ. ಮುಖ್ಯಮಂತ್ರಿ ಕೂಡ ಇದೇ ಭರವಸೆಯನ್ನು ನೀಡಿದ್ದಾರೆ ಎಂದು ಸದಾನಂದಗೌಡ ತಿಳಿಸಿದರು.
ರಾಷ್ಟ್ರಕವಿ ಕುವೆಂಪುರವರಿಗೆ ನಾವು ಯಾವುದೇ ರೀತಿಯ ಅವಮಾನ ಮಾಡಿಲ್ಲ. ಅವರ ಎರಡು ಗೀತೆಗಳನ್ನು ನಾಡಗೀತೆಗಳನ್ನಾಗಿ ಮಾಡಿದ್ದೇ ಬಿಜೆಪಿ ಸರ್ಕಾರ. ಪ್ರತಿಪಕ್ಷ ನಾಯಕರು ಹಳೆಯ ವಿಚಾರಗಳನ್ನೇ ಹಿಡಿದು ನೇತಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸಾಹಿತಿಗಳು ತಮ್ಮ ಸಾಹಿತ್ಯವನ್ನು ಹಿಂಪಡೆಯಲು ಸರ್ಕಾರಕ್ಕೆ ಪತ್ರ ಬರೆಯುವುದು ಸರಿಯಲ್ಲ. ಅದರ ಬದಲು ಏನು ಸರಿಮಾಡಬೇಕು ಎಂಬ ಬಗ್ಗೆ ಸಲಹೆ ಕೊಡಲಿ ಎಂದು ಹೇಳಿದರು
ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

