ಸಿದ್ದುಗೆ ದಲಿತರ ಬಗ್ಗೆ ಮಾತಾಡುವ ನೈತಿಕತೆ ಇದೆಯೇ -ರೇಣುಕಾಚಾರ್ಯ ಪ್ರಶ್ನೆ

ಬೆಂಗಳೂರು: ದಲಿತರನ್ನು ಮುಟ್ಟಿದರೆ ಗ್ಲಿಜರಿನ್ ಹಾಕಿ ಕೈ ತೊಳೆದುಕೊಳ್ಳುವ ಸಿದ್ದರಾಮಯ್ಯನವರಿಗೆ ಆ ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ. 

ದಲಿತರಿಗೆ ಮಾಡಿದ ಅನ್ಯಾಯದಿಂದ ಸಿಡಿದೆದ್ದು‌ ಅವರು ಸೇಡು ತೀರಿಸಿಕೊಂಡ ಪರಿಣಾಮ ಚಾಮುಂಡೇಶ್ವರಿಯಲ್ಲಿ ಸಿದ್ದು ಹೀನಾಯ ಸೋಲು ಕಂಡರು.

ಬಾದಾಮಿಯಲ್ಲಿ ತಿಣಕಾಡಿ ಒಂದು ಸಾವಿರ ಚಿಲ್ಲರೆ ಮತಗಳಿಂದ ಗೆದ್ದರು ಎಂದು ರೇಣುಕಾಚಾರ್ಯ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ.

ದಲಿತರನ್ನು ಬಳಸಿಕೊಂಡು ನಂತರ ಮೂಲೆಗುಂಪು ಮಾಡುವ ಕಾಂಗ್ರೆಸ್ ಪಕ್ಷದ ನೈಜಮುಖ ಏನೆಂಬುದು ಗೊತ್ತಾಗಿದ್ದರಿಂದಲೇ ಆ ಸಮುದಾಯ ಬಿಜೆಪಿಯನ್ನು ಬಲವಾಗಿ ಹಿಡಿದಿದೆ ಎಂದಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 5 ಮೀಸಲು ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಿತು.

ನನ್ನಿಂದಲೇ ದಲಿತರ ಉದ್ಧಾರ ಎಂದು ಬೊಬ್ಬೆ ಹಾಕಿದ ಸಿದ್ದುಗೆ ಆ ಸಮುದಾಯ ಮತ್ತೆ ಪಾಠ ಕಲಿಸಲು ತುದಿಗಾಲಲ್ಲಿ ನಿಂತಿದ್ದಾರೆ ರೇಣುಕಾಚಾರ್ಯ  ಎಚ್ಚರಿಸಿದ್ದಾರೆ.

ನೀವು ಎಷ್ಟೇ ಅಬ್ಬರಿಸಿದರೂ ಪ್ರಯೋಜನವಿಲ್ಲ. ಏಕೆಂದರೆ ಪರಮೇಶ್ವರ್‍ಗೆ ಯಾಮಾರಿಸಿದಂತೆ ಈ ಬಾರಿ ಮಹಾನಾಯಕನ ಬೆನ್ನಿಗೆ ಚೂರಿ ಹಾಕಲು ಸಾಧ್ಯವೇ ಇಲ್ಲ.

ನೀವು ಗುಂಡಿ ತೋಡುವ ಮೊದಲೇ ಅವರು ಭೇಟೆ ಮುಗಿಸುತ್ತಾರೆ.ಯಾವುದಕ್ಕೂ ಎಚ್ಚರ ಎಂದು ಸಿದ್ದರಾಮಯ್ಯನವರಿಗೆ ರೇಣುಕಾಚಾರ್ಯ ಕಿವಿಮಾತು ಹೇಳಿದ್ದಾರೆ.