ಚಾಮುಂಡೇಶ್ವರಿ ದೇವೆ ದರ್ಶನ ಪಡೆದು ಪುನೀತರಾದ ಸಹಸ್ರಾರು ಭಕ್ತರು

ಮೈಸೂರು: ಮಂಜು ಮುಸುಕಿದ ಮುಂಜಾವಿನ ತಣ್ಣನೆಯ ಕುಳಿರ್ಗಾಳಿಯಲ್ಲಿ ಗಂಟೆಗಟ್ಟಲೆ ಭಕ್ತರು ಸರತಿ ಸಾಲಿನಲ್ಲಿ ನಿಂತು  ಆದಿಶಕ್ತಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಕಣ್ ತುಂಬಿಕೊಂಡು ಪುನೀತರಾದರು.

ಚುಮುಚುಮು ಚಳಿ ನಡುವೆಯೇ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡ ಪುನೀತ ಭಾವ ಎಲ್ಲರಲ್ಲೂ ಕಂಡು ಬಂದಿತು.

ಚಾಮುಂಡಿಬೆಟ್ಟದಲ್ಲಿ ನೆಲೆ ನಿಂತಿರುವ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ ಮನೆ ಮಾಡಿತ್ತು.

ದೇವಸ್ಥಾನದ ಒಳಾವರಣ ಪ್ರವೇಶಿಸುತ್ತಿದ್ದಂತೆಯೇ ಹೂವಿನಿಂದ ಮಾಡಲಾದ ಅಲಂಕಾರ ಕಣ್ಮನ ಸೆಳೆಯುತ್ತದೆ.

ಆಷಾಢ ಶುಕ್ರವಾರ ಬಂದರೆ ಅದೇನೋ ಸಂಭ್ರಮ. ಒಂದು ಶುಕ್ರವಾರವಾದರೂ ತಾಯಿಯ ದರ್ಶನ ಪಡೆಯಬೇಕೆಂಬುದು ಭಕ್ತರ ಹೆಬ್ಬಯಕೆ.

ಆದರೆ ಕಳೆದೆರಡು ವರ್ಷಗಳಿಂದ ಮಹಾಮಾರಿ ಕೊರೊನಾದಿಂದಾಗಿ ಭಕ್ತರು ಇಂತಹ ಸೌಭಾಗ್ಯದಿಂದ ವಂಚಿತರಾಗಿದ್ದರು.

ಈ ಬಾರಿ ಕೊರೋನಾ ನಿಯಂತ್ರಣದಲ್ಲಿರುವ ಕಾರಣ ಬೆಟ್ಟಕ್ಕೆ ಜಿಲ್ಲಾಡಳಿತ ಭಕ್ತರಿಗೆ ಅವಕಾಶ ಕಲ್ಪಿಸಿದೆ.

ಹಾಗಾಗಿ ಮುಂಜಾನೆಯಿಂದಲೇ ಸಡಗರದಿಂದ ಬೆಟ್ಟಕ್ಕೆ ಬಂದ ಸಹಸ್ರಾರು ಭಕ್ತರು ನಾಡನ್ನು ರಕ್ಷಿಸುತ್ತಿರುವ ತಾಯಿಯನ್ನು ಕಂಡು ಭಕ್ತಿ ಸಮರ್ಪಿಸಿದರು.

ಚಾಮುಂಡೇಶ್ವರಿ ದೇವಿಗೆ ಮುಂಜಾನೆ ಮೂರುವರೆಯಿಂದಲೇ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.5.30ರ ನಂತರ ಭಕ್ತರಿಗೆ ‌ದೇವಿ ದರ್ಶನಕ್ಕೆ ಅವಕಾಶ ನೀಡಲಾಯಿತು.

ವಿಶೇಷ ಹೂವಿನ ಅಲಂಕಾರ ಹಾಗೂ ಅಮ್ಮನವರಿಗೆ ಲಕ್ಷ್ಮಿ ಅಲಂಕಾರವನ್ನು ಮಾಡಲಾಗಿತ್ತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೌಂಟೆಡ್ ಪೊಲೀಸರು ಗಸ್ತು ತಿರುಗುತ್ತಾ ಎಚ್ಚರಿಕೆ ವಹಿಸಿದ್ದರು.