ಸಾವರ್ಕರ್ ಕುರಿತು ಜನರಿಗೆ ತಿಳುವಳಿಕೆ ನೀಡಲು ರಥಯಾತ್ರೆ -ಪ್ರತಾಪ್ ಸಿಂಹ

ಮೈಸೂರು: ಸಾವರ್ಕರ್ ಕುರಿತು ಜನರಿಗೆ ಸರಿಯಾದ ತಿಳುವಳಿಕೆಯನ್ನು ನೀಡುವುದಕ್ಕಾಗಿ ಸಾವರ್ಕರ್ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮೈಸೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಸಾವರ್ಕರ್ ರಥಯಾತ್ರೆಗೆ ಬೇರೆ ಯಾವುದೇ ಉದ್ದೇಶಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೊಡಗಿನಲ್ಲ ನಾಲ್ಕು ದಿನ ನಿಷೇಧಾಜ್ಞೆ ಜಾರಿ ಕುರಿತು ಪ್ರತಿಕ್ರಿಯಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾಗಿರುವುದು ಜಿಲ್ಲಾಡಳಿತ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಕರ್ತವ್ಯವಾಗಿದೆ ಎಂದರು.
ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ದಿನವೇ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಮ್ಮ ರಾಜ್ಯಾಧ್ಯಕ್ಷರು, ಸಿದ್ದು ಅವರ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದರು.
ಇಂತಹ  ಘಟನೆಗಳು ಸಂಭವಿಸಬಾರದು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದರು. ಸಿದ್ದರಾಮಯ್ಯ ನವರಿಗೆ ಕೂಡಲೇ ಝಡ್ ಪ್ಲಸ್ ಭದ್ರತೆ ಕೂಡಾ ಕೊಟ್ಟಿದ್ದಾರೆ. ನಾವೆಲ್ಲರೂ ಕೂಡ ಮೊಟ್ಟೆ ಎಸೆದಿರುವುದನ್ನು ಖಂಡಿಸಿದ್ದೇವೆ ಎಂದು ತಿಳಿಸಿದರು.
ಇಷ್ಟಾಗಿಯೂ ಕೂಡ ಏಕಾಏಕಿ 26ನೇ ತಾರೀಖು ಕೊಡಗಿಗೆ ದಂಡೆತ್ತಿ ಬರುವಂತಹ ಮಾತನಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಯಾರೂ ಕೇಳದಿದ್ದರೂ ಕೂಡ ಅಲ್ಲಿ ಟಿಪ್ಪು ಜಯಂತಿಯನ್ನು ಮಾಡಿ ಕುಟ್ಟಪ್ಪ ಹತ್ಯೆಗೆ ಕಾರಣರಾದರು ಎಂದು ಪ್ರತಾಪ್ ಸಿಂಹ ಛೇಡಿಸಿದರು.
ಪಕ್ಕದ ಕೇರಳದಲ್ಲೂ ಕೂಡ ಅವರ ಸಾಕು ಮಕ್ಕಳಾಗಿರುವ ಎಸ್ ಡಿಪಿಐ ನವರಿದ್ದಾರೆ. ಅವರು ಬಂದರೆ ಅಲ್ಲಿನ ವಾತಾವರಣ ಕದಡುತ್ತದೆ. 
ಹಾಗಾಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ನಿಷೇಧಾಜ್ಞೆ ಜಾರಿಗೆ ತಂದಿದೆ. ಇದಕ್ಕೆ ಅವರು ಗೌರವ ನೀಡಲಿ. ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಅರಿತುಕೊಂಡು ಮಡಕೇರಿಗೆ ಬರುವುದನ್ನು ಕೈಬಿಡುವುದು ಒಳ್ಳೆಯದು ಎಂದರು.
6ವರ್ಷದ ಹಿಂದೆ ಆಗಿದ್ದನ್ನು ಆಗಲೇ ಹೇಳಬೇಕಿತ್ತು ಎಂಬ ಮಾಜಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರತಾಪ್ ನಂಜನಗೂಡಿಗೆ ನೆಗಿತಾರೋ , ನರಸೀಪುರದಲ್ಲಿರುತ್ತಾರೋ ಅದರ ಬಗ್ಗೆ ತಲೆಕೆಡಿಸಿಕೊಳ್ಳಲು ಹೇಳಿ ಎಂದು ತಿರುಗೇಟು ನೀಡಿದರು.