ದೊಡ್ಡಬಳ್ಳಾಪುರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಗುರಿಯೊಂದಿಗೆ ಬಿಜೆಪಿ ಜನಸ್ಪಂದನ ಸಮಾವೇಶ ಹಮ್ಮಿಕೊಂಡು ಚುನಾವಣಾ ಪ್ರಚಾರಕ್ಕೆ ರಣ ಕಹಳೆ ಮೊಳಗಿಸಿದೆ.
ದೊಡ್ಡಬಳ್ಳಾಪುರ ಹೊರವಲಯದ ರಘುನಾಥಪುರದಲ್ಲಿ ಹಮ್ಮಿಕೊಂಡಿದ್ದ ಜನ ಸ್ಪಂದನ ಕಾರ್ಯಕ್ರಮ ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ತುಂಬಿದೆ.
ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಠಕ್ಕರ್ ಕೊಡಲೆಂದೇ ನಡೆಸಿದ ಜನಸ್ಪಂದನಕ್ಕೆ ಮೂರು ಜಿಲ್ಲೆಗಳ ಸುಮಾರು 2 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಒಂದು ವರ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎರಡು ವರ್ಷಗಳ ಸಾಧನೆಗಳನ್ನು ಜನರ ಮುಂದೆ ಅನಾವರಣಗೊಳಿಸಲಾಯಿತು.
ಬಜೆಟ್‍ನಲ್ಲಿ ಘೋಷಣೆ ಮಾಡಿದ ಕಾರ್ಯಕ್ರಮಗಳು, ಅವುಗಳ ಅನುಷ್ಠಾನ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜನತೆಗೆ ಕೊಟ್ಟಿರುವ ಕೊಡುಗೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದರು.
ಕಳೆದ ತಿಂಗಳು ದಾವಣಗೆರೆಯಲ್ಲಿ ನಡೆದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆಗೆ ಪ್ರತ್ಯುತ್ತರ ನೀಡಲು ಬಿಜೆಪಿ ಈ ಸಮಾವೇಶವನ್ನು ಬಳಸಿಕೊಂಡಿತು.
ಸಮಾವೇಶದಲ್ಲಿ ಬಹುತೇಕ ನಾಯಕರು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಮಾಡಿರುವ ಸಾಧನೆಗಳನ್ನು ಒತ್ತಿ ಹೇಳಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಕಾರದಲ್ಲಿದ್ದರೆ ಡಬಲ್ ಇಂಜಿನ್ ಸರ್ಕಾರದಿಂದ ಏನೆಲ್ಲ ಉಪಯೋಗವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲು ನಾಯಕರು ಯತ್ನಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದರು.
ಅಕಾರದಲ್ಲಿದ್ದಾಗ ಏನೂ ಮಾಡದ ಕಾಂಗ್ರೆಸ್‍ನವರು ಈಗ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಐದು ವರ್ಷ ಅಧಿಕಾರದಲ್ಲಿದ್ದಾಗ ಜನಪರವಾಗಿ ಕೆಲಸ ಮಾಡಿದ್ದರೆ 78 ಸದಸ್ಯ ಸ್ಥಾನಕ್ಕೆ ಏಕೆ ಕುಸಿಯುತ್ತಿತ್ತು ಎಂದು ಪ್ರಶ್ನಿಸಿದರು.
40 ಪರ್ಸೆಂಟ್ ಬಗ್ಗೆ ಮಾತನಾಡುವವರು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಮೀಷನ್ ಕರ್ಮಕಾಂಡವನ್ನು ಅನಾವರಣ ಮಾಡಿದ್ದಾರೆ. ಇದರ ಬಗ್ಗೆ ತುಟಿ ಬಿಚ್ಚದವರು ಬೇರೆ ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಕೇಂದ್ರ ವರಿಷ್ಠರು ನಮಗೆ ಮಿಷನ್ 150 ಗುರಿ ನೀಡಿದ್ದಾರೆ. ಅದನ್ನು ಸಾಧಿಸಲು ಪ್ರತಿಯೊಬ್ಬರು ಈಗಿನಿಂದಲೇ ಚುನಾವಣೆಗೆ ಸಜ್ಜಾಗಬೇಕೆಂದು ಕರೆ ಕೊಟ್ಟರು.
ಕಾಂಗ್ರೆಸ್ ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಆ ಪಕ್ಷದ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ಕರ್ನಾಟಕದಲ್ಲಿ ಅಷ್ಟೊ ಇಷ್ಟೋ ಉಸಿರಾಡುತ್ತಿದೆ. 2023ಕ್ಕೆ ಜನ ಕರ್ನಾಟಕದಲ್ಲೂ ಕೊನೆ ಮೊಳೆ ಹೊಡೆಯಲಿದ್ದಾರೆ ಎಂದು ಎಚ್ಚರಿಸಿದರು.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತಾಡಿ, ಕಾಂಗ್ರೆಸ್ ಹಾಗೂ ಭಾರತ್ ಜೋಡೊ ಯಾತ್ರೆ ಬಗ್ಗೆ ತರಾಟೆಗೆ ತೆಗೆದುಕೊಂಡರು. ಭಾರತ್ ಜೋಡೊ ಬದಲಿಗೆ ಕಾಂಗ್ರೆಸ್ ಜೋಡೊ ಮಾಡಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು ಎಂದು ವ್ಯಂಗ್ಯ ವಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಮುನಿರತ್ನ, ಅರಗ ಜ್ಞಾನೇಂದ್ರ ಹಾಗೂ ಸಂಸದರು, ಶಾಸಕರು, ಪಕ್ಷದ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಿದ್ದರು.

