ಗಜಪಡೆಗೆ ಸಿಡಿಮದ್ದು ತಾಲೀಮು

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳಿಗೆ  ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಯಿತು. 
ಸೋಮವಾರ ನಡೆದ ತಾಲೀಮಿನಲ್ಲಿ ಬೆದರದೆ ಗಜಪಡೆಗಳು ಯಶಸ್ವಿಯಾಗಿವೆ.
ಅರಮನೆಯ ವರಾಹ ದ್ವಾರದ ಬಳಿ ಇರುವ ಕೋಟೆ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಮೂರು ಸುತ್ತಿನ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ನಡೆಯಿತು.
ಅಕ್ಟೋಬರ್ 5ರಂದು ನಡೆಯಲಿರುವ ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆ ಮತ್ತು ಅಶ್ವಾರೋಹಿದಳದ ಕುದುರೆಗಳು ಭಾರೀ ಶಬ್ದಗಳಿಗೆ ಬೆಚ್ಚದಂತೆ ಈ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಯಿತು.
ಅರಮನೆಯಲ್ಲಿದ್ದ 11ಫಿರಂಗಿ ಗಾಡಿಗಳನ್ನು ಹೊರತೆಗೆದು ಅವುಗಳನ್ನು ಸ್ವಚ್ಛಗೊಳಿಸಿದ ಬಳಿಕ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು.
ನಂತರ ಕೋಟೆ ಮಾರಮ್ಮ ದೇವಾಲಯದ ಆವರಣದಲ್ಲಿ ಸೋಮವಾರ 12ಗಂಟೆಗೆ 7ಫಿರಂಗಿ ಗಾಡಿಗಳಿಂದ ಮೂರು ಸುತ್ತಿನ ಕುಶಾಲತೋಪು ಸಿಡಿಸಿ ಆನೆ ಮತ್ತು ಕುದುರೆಗಳಿಗೆ ಸಿಡಿಮದ್ದಿನ ಶಬ್ದ ಪರಿಚಯಿಸಲಾಯಿತು. 
ಮೂರು ಆನೆಗಳು  ಕೊಂಚ ಗಲಿಬಿಲಿಯಾಗಿದ್ದು ಬಿಟ್ಟರೆ ಬೇರೆ ಏನೂ ಅನಾಹುತಗಳು ಸಂಭವಿಸಿಲ್ಲ.
ಕುಶಾಲ ತೋಪು ಸಿಡಿಸುತ್ತಿದ್ದಂತೆ ಕುದುರೆಗಳು ಬೆಚ್ಚಿದ್ದವು. ಕುದುರೆಗಳು ಅಡ್ಡಾದಿಡ್ಡಿ ಓಡಿದ್ದರಿಂದ ಆನೆಗಳು ಕೊಂಚ ಗಲಿಬಿಲಿಗೊಂಡಿತು.
ಈ ವೇಳೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ  ದಸರಾ ಮಹೋತ್ಸವ ಅಂಗವಾಗಿ  ಮೊದಲನೆ  ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು ಎಂದು ಹೇಳಿದರು.
ಅಶ್ವಗಳು, ಆನೆಗಳು ಕುಶಾಲತೋಪಿನಿಂದ ಸಿಡಿಯುವ ಶಬ್ದಕ್ಕೆ ಬೆದರಬಾರದು. ಅವುಗಳಿಗೆ ಅಭ್ಯಾಸವಾಗಬೇಕು ಎಂಬ ದೃಷ್ಟಿಯಲ್ಲಿ ತಾಲೀಮು ನಡೆಸಲಾಗುತ್ತಿದೆ ಎಂದರು.
ಇನ್ನೂ ಎರಡು ತಾಲೀಮು ನಡೆಸುತ್ತೇವೆ. ಕೊನೆಯದಿನ ವಿಜಯ ದಶಮಿಯಂದು ಅಂಬಾರಿಯ ಮೆರವಣಿಗೆಯ ವೇಳೆ ರಾಷ್ಟ್ರಗೀತೆ ನುಡಿಸುವ ವೇಳೆ 21 ಸುತ್ತು ಕುಶಾಲತೋಪು ಸಿಡಿಸಿ ಗೌರವ ಸೂಚಿಸಲಾಗುವುದು ಎಂದು ತಿಳಿಸಿದರು.
ಒಟ್ಟಾರೆ 43ಕುದುರೆಗಳು ಭಾಗಿಯಾಗಿದ್ದವು. ಮೆರವಣಿಗೆಯ ವೇಳೆ 38 ಸಿಆರ್ ಪಿ  ಸಿಬ್ಬಂದಿ ಭಾಗಿಯಾಗಿದ್ದರು.  
16ನೇ ತಾರೀಖು ಮತ್ತೊಂದು ತಾಲೀಮು ನಡೆಸಲಾಗುವುದು ಎಂದರು.
ಯಾವುದೇ ರೀತಿಯೂ ಹಾನಿಯಾಗದಂತೆ ಕೇವಲ ಶಬ್ದ ಬರುವಂತೆ ಸಿಡಿಸಲಾಗುವುದು ಎಂದು ತಿಳಿಸಿದರು.
ಡಿಸಿಎಫ್ ಡಾ.ವಿ.ಕರಿಕಾಳನ್ ಮಾತನಾಡಿ ದಸರಾ ಮಹೋತ್ಸವ  ಪ್ರಯುಕ್ತ 14 ಆನೆಗಳಿಗೆ ಕುಶಾಲತೋಪು ತಾಲೀಮು ನಡೆಸಿದ್ದೇವೆ ಎಂದು ಹೇಳಿದರು.
ಅಂಬಾರಿ ಆನೆ ಮತ್ತು ಕುಮ್ಕಿ ಆನೆ, ನಿಶಾನೆ ಆನೆ ಮುಂದಿರಲಿದೆ. ಆನೆಗಳು ಮುಂದೆ ಹಿಂದೆ ಚಲಿಸಿದ್ದು ಬಿಟ್ಟರೆ ಯಾವುದೇ ಅನಾಹುತ ಸೃಷ್ಟಿಸಲಿಲ್ಲ ಎಂದು ಸ್ಪಷ್ಟಪಡಿಸಿದರು.
ಶ್ರೀರಾಮ, ಸುಗ್ರೀವ, ಪಾರ್ಥಸಾರಥಿ  ಸ್ವಲ್ಪ ಗಲಿಬಿಲಿಯಾದವು. ಲಕ್ಷ್ಮಿ ಹೆದರದೆ ಮುಂದೆ ಬಂದಿದೆ ಎಂದರು.
ಆನೆ ನೋಡಿ ಅಶ್ವ ಹಿಂದೆ ಸರಿದ ಕುರಿತು ಪ್ರತಿಕ್ರಿಯಿಸಿ ತರಬೇತಿ ಇದ್ದರೂ ಅವೆಲ್ಲ ವನ್ಯಮೃಗಗಳು. ಅವುಗಳ ಗುಣ ಅದಕ್ಕಿದ್ದೇ ಇರುತ್ತದೆ ಎಂದು ತಿಳಿಸಿದರು. 
16ನೇ ತಾರೀಖು, 23ನೇ ತಾರೀಖು ಮತ್ತೆರಡು  ತಾಲೀಮು ನಡೆಯಲಿದೆ. ನಿಶಾನೆ ಆನೆಯಾಗಿ ಅರ್ಜುನ ಹೋಗಲಿದ್ದಾನೆ ಎಂದು ಮಾಹಿತಿ ನೀಡಿದರು.
ಶ್ರೀರಂಗಪಟ್ಟಣ ದಸರಾಕ್ಕೆ ಐದು ಆನೆ ಕೇಳಿದ್ದಾರೆ. ಮೂರು ಆನೆ ಖಂಡಿತ ಹೋಗತ್ತವೆ. 
ಆನೆ ನಡೆಯುವ ಜಾಗದಲ್ಲಿ ಐದು ಅಡಿ ದೂರವಾದರೂ ಜನರು ನಿಲ್ಲಬೇಕು. ಆನೆಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುವ ತಾಲೀಮು ವೇಳೆ  ವಾಹನಗಳ ಶಬ್ದಕ್ಕೂ ಬೆದರಿರಲಿಲ್ಲ ಎಂದು ತಿಳಿಸಿದರು. 
ಕಾರ್ಯಕ್ರಮದಲ್ಲಿ ಮೈಸೂರು ವೃತ್ತದ ಸಿಎಫ್ ಡಾ.ಮಾಲತಿ ಪ್ರಿಯಾ, ಡಿಸಿಎಫ್ ಗಳಾದ ಕಮಲಾ ಕರಿಕಾಳನ್, ಶ್ರೀಧರ್, ಪ್ರಸನ್ನ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.