ರಸ್ತೆ ಗುಂಡಿಗಳಲ್ಲಿ ರಂಗೋಲಿ ಬಿಡಿಸಿ ಗಿಡ ನೆಟ್ಟು ವಿನೂತನ ಪ್ರತಿಭಟನೆ

ಮೈಸೂರು: ನಗರದ ರಸ್ತೆಗಳು  ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗೆ ಒತ್ತಾಯಿಸಿ ಕೆ ಆರ್ ಎಂ ಫೌಂಡೇಶನ್ ವತಿಯಿಂದ ವಿನೂತನ ಪ್ರತಿಭಟನೆ ನಡೆಸಿದರು.

ಕುವೆಂಪುನಗರದ ನೃಪತುಂಗ  ರಸ್ತೆಯಲ್ಲಿ ಗುಂಡಿಗಳಲ್ಲಿ ರಂಗೋಲಿ ಬಿಡಿಸಿ, ಗಿಡ ನೆಟ್ಟು ಅಣಕು ಪ್ರದರ್ಶನ ಮಾಡುವ ಮೂಲಕ ನಗರಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ‌ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್ ಯುವ ಮುಖಂಡ  ನವೀನ್ ಕುಮಾರ್  ಮಾತನಾಡಿ, ಮೈಸೂರಿನ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ, ವೃದ್ಧರು, ರೋಗಿಗಳು ಸಂಚರಿಸುವುದು ಕಷ್ಟವಾಗಿದೆ ಎಂದು ಕಿಡಿಕಾರಿದರು.

ಶಾಲಾ ಮಕ್ಕಳು, ಕಾರ್ಮಿಕರು,  ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ.

ನಾಡಹಬ್ಬದ ಸಂದರ್ಭದಲ್ಲಿ ಮಾತ್ರ ಪ್ರಮುಖ ರಸ್ತೆಗಳು ಅಭಿವೃದ್ಧಿ ಕಾಣುತ್ತವೆ ಉಳಿದ ರಸ್ತೆಗಳು ಹಾಗೇ ಇರುತ್ತವೆ ಎಂದು ‌ದೂರಿದರು.

ನಗರಪಾಲಿಕೆ ಕೂಡಲೇ ಎಲ್ಲಾ ಬಡಾವಣೆಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ನವೀನ್ ಒತ್ತಾಯಿಸಿದರು.

ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಸಂದರ್ಭ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಯಿತು. ಆದರೆ ಆ ರಸ್ತೆಗಳಲ್ಲೂ ಹೊಂಡಗಳು ಕಾಣಿಸುತ್ತಿವೆ.

ಇನ್ನು ಮುಂದೆ ಕೈಗೊಳ್ಳುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ, ಸುದೀರ್ಘ ಬಾಳಿಕೆ ಬರುವಂತಿರಬೇಕು ಎಂದು ಆಗ್ರಹಿಸಿದರು.

ಪ್ರವಾಸಿಗರು ಇಲ್ಲಿನ ರಸ್ತೆಗಳನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿ ವರ್ಷ ರಸ್ತೆಗಳು‌ ಹಾಳಾಗಲು ಕಳಪೆ ಕಾಮಗಾರಿಯೇ ಕಾರಣ,ಕಮಿಷನ್ ಹಾವಳಿ ಯಿಂದ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ ಎಂದು ಅವರು ದೂರಿದರು.

ದಸರಾ ಉದ್ಘಾಟನೆಗೆ ಆಗಮಿಸಲಿರುವ ರಾಷ್ಟ್ರಪತಿಯವರು ಮೈಸೂರು ನಗರದ ರಸ್ತೆಗಳಲ್ಲಿ ಸಂಚರಿಸಲಿ ಆಗಲಾದರೂ ಮೈಸೂರಿನ ರಸ್ತೆಗಳನ್ನು ಅಭಿವೃದ್ಧಿ ಕಾಣಬಹುದು ಎಂದು ವ್ಯಂಗ್ಯವಾಡಿದರು.

ಮೈಸೂರು ನಗರದಲ್ಲಿ ಗುಂಡಿಗಳನ್ನು ಮುಚ್ಚಿದೆ ಹೋದರೆ ಮುಂದಿನ ದಿನಗಳಲ್ಲಿ ಎಲ್ಲಾ ಗುಂಡಿಗಳಲ್ಲೂ ಬಿಜೆಪಿ ಬಾವುಟ ಹಾಗೂ ಶಾಸಕರ ಭಾವಚಿತ್ರ ನೆಡುವ ಮೂಲಕ ಪ್ರತಿಭಟಿಸುತ್ತೇವೆ ಎಂದು ಹೇಳಿದರು ಕಾಂಗ್ರೆಸ್ ಮುಖಂಡರಾದ ವಿನಯ್ ಕಣಗಾಲ್ ,ರಾಜೇಶ್ ,ಕಿರಣ್, ಭರತ್ ಬಿ ,ವಾಸುದೇವ್ ಮೂರ್ತಿ ,ಮಲ್ಲೇಶ್, ಉಮೇಶ್, ರವಿ ,ಕುಮಾರ್ ,ವಿಜಯ್, ಆನಂದ್ ಕುಮಾರ್ ತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.