ಸೆ.20ರಂದು ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಗಳಲ್ಲೊಂದಾದ ಖಾಸಗಿ ದರ್ಬಾರ್ ಗೆ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ಸೆ.20ರಂದು ಆರಂಭವಾಗಲಿದೆ.

ನವರಾತ್ರಿ ವೇಳೆ ರಾಜವಂಶಸ್ಥರು ನಡೆಸುವ ಖಾಸಗಿ ದರ್ಬಾರ್ ವೇಳೆ ರತ್ನ ಖಚಿತ ಸ್ವರ್ಣ  ಸಿಂಹಾಸನಾರೋಹಣ ಮಾಡುವುದು ವಿಶೇಷ.

ಅದಕ್ಕಾಗಿ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರಾಜವಂಶಸ್ಥರ ಸಮ್ಮುಖದಲ್ಲಿ ಅರಮನೆಯ ನೆಲಮಾಳಿಗೆಯಲ್ಲಿನ ಭದ್ರತಾ ಕೊಠಡಿಯಿಂದ ರತ್ನ ಖಚಿತ ಸ್ವರ್ಣ ಸಿಂಹಾಸನವನ್ನು ಹೊರ ತೆರೆಯಲಾಗುತ್ತದೆ.

ಅಂದು ಬೆಳಿಗ್ಗೆ 7ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.

ಭದ್ರತಾ ಕೊಠಡಿಯಿಂದ ರತ್ನ ಖಚಿತ ಸಿಂಹಾಸನದ ಭಾಗಗಳನ್ನು ಹೊರತೆಗೆದು ನವಗ್ರಹ ಹೋಮ  ಇನ್ನಿತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ನಂತರ ಅಂಬಾವಿಲಾಸ ಅರಮನೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯ ಆರಂಭವಾಗಲಿದೆ.

ಆ ಸಂದರ್ಭಕ್ಕೆ ಅರಮನೆ ಪಟ್ಟದ ಆನೆ, ಹಸು, ಕುದುರೆಗಳು ಸಾಕ್ಷಿಯಾಗಲಿವೆ.

ರಾಜವಂಶಸ್ಥರು ಆಸೀನರಾಗುವ ಸ್ಥಳ, ಸಿಂಹಾಸನವನ್ನೇರಲು ಬಳಸುವ ಮೆಟ್ಟಿಲು, ಮೆರಗು ನೀಡುವ ಛತ್ರಿ, ಸೇರಿದಂತೆ ಪ್ರಮುಖವಾಗಿ ವಿಂಗಡಿಸಿಟ್ಟಿರುವ ಹದಿಮೂರು ಭಾಗಗಳನ್ನು ನಾಜೂಕಿನಿಂದ ಜೋಡಿಸಲಾಗುತ್ತದೆ.

ಇದನ್ನು ಸ್ವರ್ಣಾಸನ ಜೋಡಣಾ ಕಾರ್ಯ ಅಂತಲೂ ಕರೆಯಲಾಗುತ್ತದೆ.

ಈ ಸೂಕ್ಷ್ಮ ಕಾರ್ಯವನ್ನು ಮೈಸೂರು ಗೆಜ್ಜಹಳ್ಳಿ ಗ್ರಾಮಸ್ಥರು ನಿರ್ವಹಿಸಲಿದ್ದಾರೆ.

ನವರಾತ್ರಿ ಮೊದಲ ದಿನ ರಾಜವಂಶಸ್ಥರು ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಸಿಂಹದ ಆಕೃತಿಯನ್ನು ಜೋಡಿಸಿದ ನಂತರ ಪರಿಪೂರ್ಣ ಸಿಂಹಾಸನವಾಗಲಿದೆ.

ಸಿಂಹಾಸನ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯಭಾಗದಲ್ಲಿ ವಿಷ್ಣುದೇವರ ಚಿತ್ರಗಳಿವೆ.

ಸಿಂಹಾಸನದ ಕಲಶದಂತಿರುವ ಛತ್ರಿಯ ಮೇಲೆ ಸಂಸ್ಕೃತದ ಶ್ಲೋಕಗಳಿವೆ. ಕುದುರೆ, ಹಂಸ, ಸ್ವಸ್ತಿಕ್ , ನಾಗದೇವತೆಯ ಚಿತ್ರಗಳನ್ನು ಚಿತ್ರಿಸಲಾಗಿದೆ.

ಸೆ.26ರಂದು ದಸರಾ ಮಹೋತ್ಸವಕ್ಕೆ ಚಾಲನೆ ದೊರಕುತ್ತಿದ್ದಂತೆಯೇ ಖಾಸಗಿ ದರ್ಬಾರ್ ಕೂಡ ಆರಂಭವಾಗಲಿದೆ.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯ ದರ್ಬಾರ್ ಸಭಾಂಗಣದಲ್ಲಿ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಬಳಿಕ ಸಿಂಹಾಸನಾರೂಢರಾಗುತ್ತಾರೆ.

ಈ ಮೂಲಕ ಖಾಸಗಿ ದರ್ಬಾರ್ ಗೆ ಚಾಲನೆ ಸಿಗಲಿದೆ.

ಬೆಳಿಗ್ಗೆಯಿಂದಲೇ ಅರಮನೆ ಪುರೋಹಿತರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದ್ದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಭಾಗಿಯಾಗಲಿದ್ದಾರೆ.

ಅರಮನೆ ಚಾಮುಂಡಿತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ್  ಒಡೆಯರ್ ಅವರಿಗೆ ಕಂಕಣ ಧಾರಣೆಯಾಗಿ ಸವಾರಿ ತೊಟ್ಟಿಯಿಂದ  ಅವರನ್ನು ಬಿರುದು ಬಾವಲಿಗಳ ಬಹುಪರಾಕ್ ನೊಂದಿಗೆ ದರ್ಬಾರ್ ಸಭಾಂಗಣಕ್ಕೆ ಕರೆತರಲಾಗುತ್ತದೆ.

ಸಿಂಹಾಸನದ ಬಳಿ ಕಳಸ ಪೂಜೆ, ಪ್ರದಕ್ಷಿಣೆ ಹೀಗೆ ಹಲವು ವಿಧಿ ವಿಧಾನಗಳ ಬಳಿಕ ನಿಗದಿತ ಶುಭ ಘಳಿಗೆಯಲ್ಲಿ ರತ್ನ ಖಚಿತ ಸಿಂಹಾಸನದಲ್ಲಿ ಯದುವೀರ್ ಅವರು ವಿರಾಜಮಾನರಾಗಲಿದ್ದಾರೆ.

ಈ ವೇಳೆ ತಾಯಿ ಶ್ರೀಚಾಮುಂಡೇಶ್ವರಿ ಅಮ್ಮನವರ ದೇವಾಲಯ, ಪರಕಾಲಮಠ,ಶ್ರೀರಂಗಪಟ್ಟಣದ ಶ್ರೀರಂಗನಾಥೇಶ್ವರ ದೇವಾಲಯ, ಮೇಲುಕೋಟೆ ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಾಲಯ, ಅರಮನೆಯ ಆವರಣದಲ್ಲಿರುವ ಎಲ್ಲಾ ದೇವಾಲಯಗಳ ಪ್ರಸಾದವನ್ನು ಒಡೆಯರ್ ಅವರಿಗೆ ಪುರೋಹಿತರು ನೀಡಿ ತೀರ್ಥಪ್ರೋಕ್ಷಣೆ ಮಾಡಲಿದ್ದಾರೆ.

ಖಾಸಗಿ ದರ್ಬಾರ್ ಪ್ರಯುಕ್ತ ಸೆ.26ರಂದು  ಕೂಡ ಮಧ್ಯಾಹ್ನ 2ಗಂಟೆಯವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆಯ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ.