ಗಂಡು ಮರಿಗೆ ಜನ್ಮ ನೀಡಿದ ಲಕ್ಷ್ಮೀ

ಮೈಸೂರು: ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ 22ವರ್ಷದ ಹೆಣ್ಣಾನೆ ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಇದು ಸಂತಸದ ವಿಷಯವೇ ಆಗಿದೆ.
ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿ ದೇವಿಯವರು ಲಕ್ಷ್ಮಿಯನ್ನು ಸಾಕಿ ಬೆಳೆಸಿದ್ದರು. 
ಲಕ್ಷ್ಮಿ ಇದೀಗ ಅರಮನೆ ಆವರಣದಲ್ಲೇ ಎರಡನೇ ಮರಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ.
ಈ ಹಿಂದೆ ತಾಯಿಯಿಂದ ಬೇರ್ಪಟ್ಟ ಹೆಣ್ಣು ಆನೆಮರಿಯೊಂದನ್ನು ವಿಶಾಲಾಕ್ಷಿ ದೇವಿ ಅರಣ್ಯ ಇಲಾಖೆ ಒಪ್ಪಿಗೆಯ ಮೇರೆಗೆ ಬಂಡೀಪುರ ಕಾಡಂಚಿನ ತಮ್ಮ ರೆಸಾರ್ಟ್ ನಲ್ಲಿ ಸಾಕಿ ಸಲಹಿದ್ದರು. 
ನಂತರ ಸುಪ್ರೀಂಕೋರ್ಟ್ ನಿರ್ದೇಶನದಂತೆ ಇದನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದರು.
ಇಂದಿಗೂ ವಿಶಾಲಾಕ್ಷಿ ದೇವಿಯವರ ಮಕ್ಕಳು ರಾಂಪುರ ಆನೆಶಿಬಿರಕ್ಕೆ ತೆರಳಿ ಲಕ್ಷ್ಮಿಯನ್ನು ಮನೆಮಗಳಂತೆ ಉಪಚರಿಸುವ ರೂಢಿ ಇರಿಸಿಕೊಂಡಿದ್ದಾರೆ.
ಆ.7ರಂದು ಮೊದಲ ತಂಡದಲ್ಲೇ ಆಗಮಿಸಿದ ಲಕ್ಷ್ಮಿ ನಿನ್ನೆಯವರೆಗೂ ತಾಲೀಮಿನಲ್ಲಿ ಭಾಗಿಯಾಗಿತ್ತು.
ನಿನ್ನೆ ಮಧ್ಯಾಹ್ನ ಲಕ್ಷ್ಮಿ ವರ್ತನೆಯಲ್ಲಿ ಕೊಂಚ ಬದಲಾವಣೆ ಕಂಡು ಬಂದಿತ್ತು. ಇದನ್ನು ಗಮನಿಸಿದ ಮಾವುತರು ವೈದ್ಯರ ಗಮನಕ್ಕೆ ತಂದರು. 
ನಂತರ ವೈದ್ಯರು  ಪರೀಕ್ಷೆ ನಡೆಸಿದ ವೇಳೆ ಲಕ್ಷ್ಮಿ ತುಂಬು ಗರ್ಭಿಣಿಯಾಗಿದ್ದು ಪ್ರಸವ ವೇದನೆ ಅನುಭವಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ.
ಮುಂಜಾಗೃತಾ ಕ್ರಮವಾಗಿ ಆಕೆಯನ್ನು ಬ್ರಹ್ಮಪುರಿ ಗೇಟ್ ಸಮೀಪ ಅಡುಗೆ ತಯಾರಿಸುವ ಸ್ಥಳದಲ್ಲಿ ಇರಿಸಿ ನಿಗಾವಹಿಸಲಾಗಿತ್ತು. 
ರಾತ್ರಿ 8.10ರ ಸುಮಾರಿಗೆ  ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿದ್ದು.ತಾಯಿ ಹಾಗೂ ಮರಿ ಇಬ್ಬರೂ ಆರೋಗ್ಯವಾಗಿದ್ದಾರೆ.
ಡಿಸಿಎಫ್ ಡಾ.ವಿ.ಕರಿಕಾಳನ್, ಪಶುವೈದ್ಯ ಡಾ.ಮುಜೀಬ್, ಆರ್ ಎಫ್ ಒ ಸಂತೋಷ್ ಹೂಗಾರ್  ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಗಜಪಡೆಯ ಹಿರಿಯ ಮಾವುತರ ಸಹಕಾರದೊಂದಿಗೆ ಲಕ್ಷ್ಮಿ ಹಾಗೂ ಮರಿ ಆನೆಯ ಆರೈಕೆ ನಡೆದಿದೆ. ಅವುಗಳ ಸಮೀಪ ಯಾರೂ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ. 
ಲಕ್ಷ್ಮಿ ಮರಿಯಿಂದ ಆನೆಗಳ ಸಂಖ್ಯೆ 15ಕ್ಕೇರಿದೆ. ಲಕ್ಷ್ಮಿ ಹಾಗೂ ಮರಿ ಆನೆ ಅರಮನೆ ಆವರಣದಲ್ಲೇ ಉಳಿಯಲಿದ್ದು 13 ಆನೆಗಳು ಮಾತ್ರ ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ.       
ಪ್ರಸವದ ಬಳಿಕ ಮೂರ್ನಾಲ್ಕು ತಿಂಗಳು ತಾಯಿ ಮತ್ತು ಮರಿಯನ್ನು ಶಿಬಿರಕ್ಕೆ ಸಾಗಿಸುವುದು ಸೂಕ್ತವಲ್ಲ ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಹಾಗಾಗಿ ಇನ್ನೂ ಕೆಲವು ತಿಂಗಳು ಲಕ್ಷ್ಮಿ ಹಾಗೂ ಮರಿ ಅರಮನೆ ಆವರಣದಲ್ಲಿಯೇ ಉಳಿಯುವ ಸಾಧ್ಯತೆ ಇದೆ.