ರಂಗಾಯಣದಲ್ಲಿ ದಸರಾ ರಂಗೋತ್ಸವ

ಮೈಸೂರು: ಈ ಬಾರಿ ಸೆ.25ರಿಂದ ಅಕ್ಟೋಬರ್ 4ರವರೆಗೆ ದಸರಾ ರಂಗೋತ್ಸವವನ್ನು ಆಯೋಜಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ರಂಗಾಯಣದ ಆವರಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿದರ
ಹತ್ತುದಿನಗಳ ಕಾಲ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಪ್ರತಿದಿನ ಪ್ರತಿದಿನ ಸಂಜೆ 6.30ಕ್ಕೆ ನಾಟಕಗಳು ಪ್ರದರ್ಶನಗೊಳ್ಳಲಿದೆ. 
ಈ ಬಾರಿಯ ದಸರಾ ರಂಗಗೌರವ ಪುರಸ್ಕಾರವನ್ನು ಹಿರಿಯ ರಂಗಕರ್ಮಿ ನಾಟಕಕಾರ ಡಾ.ನ.ರತ್ನ ಅವರಿಗೆ ನೀಡಿ ಸನ್ಮಾನಿಸಲಾಗುತ್ತದೆ ಎಂದು ಕಾರ್ಯಪ್ಪ ತಿಳಿಸಿದರು. 
ಅ.4ರಂದು ನಡೆಯುವ ದಸರಾ ರಂಗೋತ್ಸವ ಸಮಾರೋಪ ಸಮಾರಂಭದಲ್ಲಿ ಸಚಿವರಾದ ಎಸ್.ಟಿ.ಸೋಮಶೇಖರ್, ವಿ.ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ. 
ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆಯಲ್ಲಿ   ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ದಸರಾ ರಂಗೋತ್ಸವದಲ್ಲಿ ಸೆ.25ರಂದು ಮೈಸೂರು  ಆರ್.ನಾಗೇಶ್ ನಿರ್ದೇಶನದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥೆ ಕೃಷ್ಣೇಗೌಡನ ಆನೆ, ಸೆ.26ರಂದು ವಿನೋದ್ ಕಡಂಗಲ್ ಮಾರ್ಗದರ್ಶನದಲ್ಲಿ ನಂದಕುಮಾರ್ ಜಿ.ಕೆ ನಿರ್ದೇಶನದಲ್ಲಿ ಸಮರಕಥಾ ನಾಟಕ ಪ್ರದರ್ಶನವಿದೆ.
ಸೆ.27ರಂದು ನಾಗಾರ್ಜುನ ಆರಾಧ್ಯ ನಿರ್ದೇಶನದಲ್ಲಿ ಪಿ.ಲಂಕೇಶ್ ರಚನೆಯ ಪೊಲೀಸರಿದ್ದಾರೆ ಎಚ್ಚರಿಕೆ, ಸೆ.28ರಂದು ಶ್ರೀಪಾದ ಭಟ್ ನಿರ್ದೇಶನದಲ್ಲಿ ಸುಧಾ ಆಡುಕಳ ರಚನೆಯ ಮಾಧವಿ.
ಸೆ.29ರಂದು  ಶಶಿರಾಜ್ ಕಾವೂರ್  ನಿರ್ದೇಶನದಲ್ಲಿ ದಾಟ್ಸ್ ಆಲ್ ಯುವರ್ ಆನರ್, ಸೆ.30ರಂದು  ವೀಣಾಶರ್ಮ ಭೂಸನೂರುಮಠ ನಿರ್ದೇಶನದಲ್ಲಿ ಮಾಕ್ಸಿಂಗಾರ್ಕಿ ರಚನೆಯ ಈ ಕೆಳಗಿನವರು.
ಅ.1ರಂದು ವಾಲ್ಟರ್ ಡಿಸೋಜ ನಿರ್ದೇಶನದಲ್ಲಿ ಮಾರೀಚನ ಬಂಧುಗಳು, ಅ.2ರಂದು ಅಡ್ಡಂಡ ಸಿ ಕಾರ್ಯಪ್ಪ ರಚನೆ,  ನಿರ್ದೇಶನದ ಹಲಗಲಿ ಸಮರ.
ಅ.3ರಂದು ಮಂಜುನಾಥ್ ಎಲ್.ಬಡಿಗೇರ ನಿರ್ದೇಶನದ ಮೌನೇಶ್ ಬಡಿಗೇರ ರಚನೆಯ ವಿಶಾಂಕೇ,ಅ.4ರಂದು ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಕುವೆಂಪು ರಚನೆಯ ಶ್ರೀರಾಮಾಯಣ ದರ್ಶನಂ ಆಯ್ದಭಾಗ ಮಮತೆಯ ಸುಳಿ ನಾಟಕವನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.
ಮೈಸೂರು ರಂಗಾಯಣದ ಆವರಣದಲ್ಲಿ ಸೆ.19ರಿಂದ 24ರವರೆಗೆ ಭಾರತೀಯ ರಂಗ ಸಂಗೀತೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.
ಸೆ.19ರಂದು ಸಂಜೆ 6ಗಂಟೆಗೆ ಭೂಮಿಗೀತ ರಂಗಮಂದಿರದಲ್ಲಿ ಕಾರ್ಯಕ್ರಮವನ್ನು ಮುಂಬೈನ ಖ್ಯಾತ ರಂಗ ಸಂಗೀತ ನಿರ್ದೇಶಕ ಅಮೋದ್ ಭಟ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಲಾವಿದ ಅರುಣ್ ಸಾಗರ್ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಬಿ.ವಿ.ಕಾರಂತ ಸಾಕ್ಷ್ಯ ಚಿತ್ರ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.
ಸೆ.19ರಿಂದ 24ರವರೆಗೆ ರಂಗಸಂಗೀತ, ರಂಗಗೀತೆಗಳು ಮತ್ತು ನಾಟಕ ಪ್ರದರ್ಶನಗೊಳ್ಳಲಿದೆ.
ರಂಗತರಬೇತಿ ಶಿಬಿರ: ರಂಗಾಯಣ ಮೈಸೂರು ಹವ್ಯಾಸಿ ಕಲಾವಿದರಿಗಾಗಿ ಸುಬ್ಬಯ್ಯ ನಾಯ್ಡು ಹಾಗೂ ಪದ್ಮಶ್ರೀ ನಾಗರತ್ನಮ್ಮ ಇವರ ಹೆಸರಿನಲ್ಲಿ ಅಲ್ಪಾವಧಿ ಅಭಿನಯ ರಂಗತರಬೇತಿ ಶಿಬಿರವನ್ನು ಅಕ್ಟೋಬರ್ 5ರಿಂದ ಹಮ್ಮಿಕೊಳ್ಳಲಾಗಿದೆ.
18ರಿಂದ 40ವರ್ಷ ವಯೋಮಿತಿಯೊಳಗಿನ ಆಸಕ್ತರಿಗೆ 45ದಿನಗಳ ರಂಗಶಿಕ್ಷಣ ತರಬೇತಿಯನ್ನು ನೀಡಲಾಗುವುದು. 
ತರಗತಿಗಳು ಪ್ರತಿದಿನ ಸಂಜೆ 5ರಿಂದ 8ರವರೆಗೆ ನಡೆಯಲಿದೆ. ತರಬೇತಿಯ ನಂತರ ಅಧಿಕೃತ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಉಪನಿರ್ದೇಶಕರಾದ ನಿರ್ಮಲಾ ಮಠಪತಿ ಉಪಸ್ಥಿತರಿದ್ದರು.