ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ

ಮೈಸೂರು: ದಸರಾ ಮಹೋತ್ಸವ ಹಾಗೂ ನವರಾತ್ರಿ ಪ್ರಯುಕ್ತ ಅಂಬಾವಿಲಾಸ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ನೆರವೇರಿತು.

ಸಿಂಹಾಸನಾ ಜೋಡಣೆ ಪ್ರಯುಕ್ತ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಅರಮನೆ ಪ್ರವೇಶಿಸುವ ಎಲ್ಲ ದ್ವಾರಗಳನ್ನು ಬಂದ್ ಮಾಡಲಾಗಿತ್ತು.

ರತ್ನಖಚಿತ ಸಿಂಹಾಸನ ಜೋಡಣಾ ಕಾರ್ಯದೊಂದಿಗೆ ಮೈಸೂರು ಅರಮನೆಯಲ್ಲಿ ದಸರಾ ಖಾಸಗಿ ದರ್ಬಾರ್ ಸಿದ್ಧತೆಗೆ ಚಾಲನೆ ಲಭಿಸಿದಂತಾಗಿದೆ.

ಅರಮನೆ ಪಂಚಾಂಗದಂತೆ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಿಲಾಯಿತು.

ಸಿಂಹಾಸನ ಜೋಡಣೆ ಅಂಗವಾಗಿ ಚಾಮುಂಡೇಶ್ವರಿ ಪೂಜೆ, ಗಣಪತಿ ಹೋಮ ನಡೆಯಿತು.

ರತ್ನ ಖಚಿತ ಸ್ವರ್ಣ ಸಿಂಹಾಸನವನ್ನು ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರಾಜವಂಶಸ್ಥರ ಸಮ್ಮುಖದಲ್ಲಿ ಅರಮನೆಯ ನೆಲಮಾಳಿಗೆಯಲ್ಲಿನ ಭದ್ರತಾ ಕೊಠಡಿಯಿಂದ ಹೊರ ತರಲಾಯಿತು.

ಸಿಂಹಾಸನದ ಭಾಗಗಳ ಜೋಡಣೆಗೂ ಮುಂಚೆ ಕೈಗೊಳ್ಳಲಾದ ನವಗ್ರಹ ಹೋಮ ಇನ್ನಿತರ ಪೂಜಾ ಕೈಂಕರ್ಯಗಳಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾದರು.

ರಾಜವಂಶಸ್ಥರು ಆಸೀನರಾಗುವ ಸ್ಥಳ, ಸಿಂಹಾಸನವನ್ನೇರಲು ಬಳಸುವ ಮೆಟ್ಟಿಲು, ಮೆರಗು ನೀಡುವ ಛತ್ರಿ, ಸೇರಿದಂತೆ ಪ್ರಮುಖವಾಗಿ ವಿಂಗಡಿಸಿಟ್ಟಿರುವ ಹದಿಮೂರು ಭಾಗಗಳನ್ನು ನಾಜೂಕಿನಿಂದ ಜೋಡಿಸಲಾಯಿತು.

ಇದನ್ನು ಸ್ವರ್ಣಾಸನ ಜೋಡಣಾ ಕಾರ್ಯ ಅಂತಲೂ ಕರೆಯಲಾಗುತ್ತದೆ.

ಸೂಕ್ಷ್ಮ ಕಾರ್ಯವನ್ನು ಪ್ರತಿವರ್ಷ ಮೈಸೂರು ಗೆಜ್ಜಹಳ್ಳಿ ಗ್ರಾಮಸ್ಥರು ನಿರ್ವಹಿಸುತ್ತಾರೆ.

ನವರಾತ್ರಿ ಮೊದಲ ದಿನ ರಾಜವಂಶಸ್ಥರು ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಸಿಂಹದ ಆಕೃತಿಯನ್ನು ಜೋಡಿಸಿದ ನಂತರವಷ್ಟೇ ಪರಿಪೂರ್ಣ ಸಿಂಹಾಸನವಾಗುವುದು.

ಸ್ವತಃ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರೇ ಮುತುವರ್ಜಿ ವಹಿಸಿ ಸಿಂಹಾಸನ ಜೋಡಣಾ ಕಾರ್ಯ ಮಾಡಿಸಿದರು. ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮಾಡಲಾಗಿತ್ತು.

ಸೆ.26ರಂದು ದಸರಾ ಮಹೋತ್ಸವಕ್ಕೆ ಚಾಲನೆ ದೊರಕುತ್ತಿದ್ದಂತೆಯೇ ಖಾಸಗಿ ದರ್ಬಾರ್ ಕೂಡ ಆರಂಭವಾಗಲಿದೆ.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯ ದರ್ಬಾರ್ ಸಭಾಂಗಣದಲ್ಲಿ ರತ್ನ ಖಚಿತ ಸಿಂಹಾಸನಕ್ಕೆ ಸಿಂಹದ ಆಕೃತಿಯನ್ನು ಜೋಡಿಸಿ ಪೂಜೆ ಸಲ್ಲಿಸಿ ಸಿಂಹಾಸನಾರೂಢರಾಗುವ ಮೂಲಕ ಖಾಸಗಿ ದರ್ಬಾರ್ ಗೆ ಚಾಲನೆ ಸಿಗಲಿದೆ.