ಮಂಗಳವಾರದಿಂದ ಬಿಜೆಪಿ ವಿಜಯಿ ಸಂಕಲ್ಪ ಯಾತ್ರೆ; ಕಾಂಗ್ರೆಸ್ ಪಾದಯಾತ್ರೆಗೆ ಟಕ್ಕರ್

ಬೆಂಗಳೂರು: ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ತಂತ್ರ ರೂಪಿಸುತ್ತಿರುವ ಬಿಜೆಪಿ ಮಂಗಳವಾರ ದಿಂದ ರಾಜ್ಯದಾದ್ಯಂತ ವಿಜಯಿ ಸಂಕಲ್ಪ ಯಾತ್ರೆ ಪ್ರಾರಂಭಿಸಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಈ ರಾಜ್ಯದಾದ್ಯಂತ ಸಂಘಟನಾ ಪ್ರವಾಸ ನಡೆಯಲಿದೆ.

ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಹೂಡುತ್ತಿದ್ದು, ಈ ನಿಟ್ಟಿನಲ್ಲಿ 140 ಕ್ಷೇತ್ರದಲ್ಲಿ ರಾಜ್ಯ ನಾಯಕರ ಪ್ರವಾಸ ಹಾಗೂ ಏಳು ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳಲಿದೆ.

ಚುನಾವಣಾ ದೃಷ್ಟಿಯಿಂದ ಬಿಜೆಪಿ ಎರಡು ತಂಡಗಳಲ್ಲಿ ಪ್ರವಾಸ ಹಮ್ಮಿಕೊಂಡಿದೆ. ಒಂದು ತಂಡದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ‌ಯಡಿಯೂರಪ್ಪ ಇರಲಿದ್ದಾರೆ.

ಇನ್ನೊಂದು ತಂಡದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವ ವಹಿಸುವರು.

ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ, ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದೇ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಲಿದ್ದಾರೆ ಮತ್ತು ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸುತ್ತಾರೆ.

ಡಿಸೆಂಬರ್‌ನಲ್ಲಿ ಮೈಸೂರಿನಲ್ಲಿ ಎಸ್‌ಸಿ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ ಮತ್ತು ಮಂಗಳೂರಿನಲ್ಲಿ ಯುವಮೋರ್ಚಾ ಸಮಾವೇಶ ನಡೆಸಲು ಯೋಜಿಸಲಾಗಿದೆ.

ಒಟ್ಟಾರೆ ಕಾಂಗ್ರೆಸ್ ಪಾದಯಾತ್ರೆಗೆ ಟಕ್ಕರ್ ಕೊಡುವುದರ‌ ಜತೆಗೆ ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ.