ಮೈಸೂರು: ಶ್ರೀ ಮಲೈ ಮಹದೇಶ್ವರರ ಕುಂಭಮೇಳವನ್ನು ಮಂಡ್ಯ ಜಿಲ್ಲೆ ಕೆ. ಆರ್. ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಆಯೋಜಿಸಲಾಗಿದೆ ಎಂದು ಸುತ್ತೂರು ಮಠಾಧೀಶ್ವರರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ತಿಳಿಸಿದರು.
ನಗರದ ಸುತ್ತೂರು ಮಠದಲ್ಲಿ ಸುದಿಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿದರು.
ಅ. 13 ಗುರುವಾರದಿಂದ 16 ರವರೆಗೆ ಮಹಾಕುಂಭಮೇವನ್ನು ಏರ್ಪಡಿಲಾಗಿದ್ದು ಎಲ್ಲ ಸೌಲಭ್ಯಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಕೆ. ಆರ್. ಪೇಟೆ ತಾಲ್ಲೂಕಿನ ಅಂಬಿಗರ ಹಳ್ಳಿ–ಸಂಗಾಪುರ–ಪುರ ಗ್ರಾಮದ ಬಳಿ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಈ ಕುಂಭಮೇಳ ಶ್ರೀ ಆದಿಚುಂಚನಗಿರಿಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವ ವಹಿಸುವರು ಎಂದು ಶ್ರೀಗಳು ತಿಳಿಸಿದರು.
ಅ. 16ರಂದು ನಡಯಲಿರುವ ಕುಂಭಮೇಳದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ನೆರವೇರಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಳೆದ 2013ರಲ್ಲಿ ಕುಂಭ ಮೇಳ ನಡೆದಿತ್ತು. ಆದಾದ 9 ವರ್ಷಗಳ ನಂತರ ಈಗ 2ನೇ ಬಾರಿ ಕುಂಭ ಮೇಳ ನಡೆಯುತ್ತಿದೆ ಎಂದು ತಿಳಿಸಿದರು.
ನಾಲ್ಕು ದಿನಗಳ ಕಾಲ ನಡೆಯುವ ಕುಂಭ ಮೇಳದಲ್ಲಿ ಹಲವಾರು ಸಾಧು ಸಂತರು ಭಾಗವಹಿಸಲಿದ್ದಾರೆ.
ಈ ಮೇಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀಗಳು ತಿಳಿಸಿದರು.
ನಾಲ್ಕು ದಿನಗಳ ಮಹಾ ಕುಂಭಮೇಳಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಿದ್ದಾರೆ.
ಮಹದೇಶ್ವರರ ಜೀವನ ಚರಿತ್ರೆ ಕುರಿತು ಅಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ರಾಜ್ಯ ಸರ್ಕಾರದಿಂದ ಈ ಮಹಾ ಕುಂಭಮೇಳಕ್ಕೆ 4 ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಭಕ್ತರಿಂದಲೂ ಕೂಡ ಸುಮಾರು 1 ಸಾವಿರ ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದೆ. 5 ರಿಂದ 6 ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ.
ಈ ಮಹಾ ಕುಂಭಮೇಳವನ್ನ ಮೈಸೂರು, ಚಾಮರಾಜನಗರ ಹಾಸನ ಮಂಡ್ಯ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಚಿವರುಗಳಾದ ನಾರಾಯಣ ಗೌಡ, ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಬೇಬಿ ಮಠದ ಶ್ರೀಗಳಾದ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿಸ್ವಾಮಿಜಿ,ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವತಿ ಮತ್ತಿತರರು ಉಪಸ್ಥಿತರಿದ್ದರು.

