ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ)ದ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ನಿಷೇಧಿತ ಪಿಎಫ್‍ಐ ಸಂಘಟನೆಯ ಪದಾಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ಈ ವೇಳೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಮೈಸೂರು, ಹುಬ್ಬಳ್ಳಿ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ.
ಮೈಸೂರಿನ ಮಂಡಿಮೊಹಲ್ಲಾದಲ್ಲಿರುವ ಪಿಎಫ್‍ಐ ಸಂಘಟನೆಯ ಮಾಜಿ ಕಾರ್ಯದರ್ಶಿ ಸುಲೇಮಾನ್‍ರ ಮನೆ ಮೇಲೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಧಾರವಾಡ ಜಿಲ್ಲೆ ಹಳೆ ಹುಬ್ಬಳ್ಳಿಯಲ್ಲಿ ನುರಾನಿ ಪ್ಲಾಟ್‍ನಲ್ಲಿರುವ ಎಸ್‍ಡಿಪಿಐ ಮುಖಂಡ ಇಸ್ಮಾಯಿಲ್ ನಾಲಾಬಂದ್ ಅವರ ಮನೆಯ ಮೇಲೆ ಎನ್‍ಐಎ ತಂಡ ದಾಳಿ ನಡೆಸಿದೆ.
ಮುಂಜಾನೆ 4 ಗಂಟೆಗೆ 10 ಜನ ಅಧಿಕಾರಿಗಳ ತಂಡ ಇಸ್ಮಾಯಿಲ್‍ರ ಮನೆಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸಿ, ಇಸ್ಮಾಯಿಲ್‍ರನ್ನು ವಿಚಾರಣೆ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲೂ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಬೆಳ್ಳಾರೆ, ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಸುಳ್ಯದ ಇಬ್ರಾಹಿಂ ಶಾ ಅವರನ್ನು ವಶಲಕ್ಕೆ ಪಡೆಯಲಾಗಿದೆ.
ಇತ್ತೀಚೆಗೆ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಸಂಘಟನೆಗಳ ವಿರುದ್ಧ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಎನ್‍ಐಎ ಮಾಹಿತಿ ಕಲೆ ಹಾಕುತ್ತಿದೆ.
ಭಯೋತ್ಪಾದನಾ ಕೃತ್ಯಗಳಿಗೆ ಬೆಂಬಲ ನೀಡುತ್ತಿರುವುದು ಮತ್ತು ಹಣಕಾಸು ಸಂಗ್ರಹ ನಡೆಸಿದ ಆರೋಪದ ಮೇಲೆ ಕೇಂದ್ರ ಸರ್ಕಾರ ಇತ್ತೀಚೆಗೆ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಿತ್ತು.
ಆಗ ಮೊದಲ ಹಂತದಲ್ಲಿ ದೇಶಾದ್ಯಂತ ಕಾರ್ಯಾಚರಣೆ ನಡೆಸಿ 106 ಮಂದಿಯನ್ನು ಬಂಧಿಸಲಾಗಿತ್ತು.
ನಂತರ ವಿವಿಧ ಹಂತಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 247 ಮಂದಿಯನ್ನು ಬಂಧಿಸಲಾಗಿದೆ.

