ಮೈಸೂರು: ಮಹಾರಾಷ್ಟ್ರ ಪದೇ ಪದೇ ಗಡಿ ವಿಚಾರವಾಗಿ ಕ್ಯಾತೆ ತೆಗೆಯುತ್ತಲೇ ಇದೆ. ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ದೆಹಲಿಗೆ ಹೋದಾಗ ಸುಪ್ರೀಂಕೋರ್ಟ್ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಕಾನೂನು ಹೋರಾಟಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಡಿಸೆಂಬರ್ 30ಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.
ಅಂದು ಯಾವ ವಿಷಯದ ಬಗ್ಗೆ ಚರ್ಚೆ ಬರಲಿದೆ ಎಂಬುದನ್ನು ರೋಹ್ಟಗಿ ಅವರಿಂದ ತಿಳಿದುಕೊಂಡು ನಮ್ಮ ರಾಜ್ಯದ ನಿಲುವು ಏನಿದೆ ಎಂಬುದರ ಬಗ್ಗೆ ಅವರಿಗೆ ಮಾಹಿತಿ ನೀಡಲಿದ್ದೇನೆ ಎಂದು ತಿಳಿಸಿದರು.
ಭಾನುವಾರ ಜಸ್ಟೀಸ್ ಶಿವರಾಜ ಪಾಟೀಲ್ ಅವರೊಂದಿಗೆ ಸಭೆ ನಡೆಸಿದ್ದೇನೆ.
ಮಹಾರಾಷ್ಟ್ರದ ಕೆಲ ಗ್ರಾಮದವರು ಕರ್ನಾಟಕಕ್ಕೆ ಸೇರುವುದಾಗಿ ಹೇಳಿದ್ದಾರಲ್ಲ ಎಂಬ ವರದಿಗಾರರ ಪ್ರಶ್ನೆಗೆ ಹೌದು ಈ ಎಲ್ಲಾ ವಿಚಾರಗಳ ಬಗ್ಗೆ ದೆಹಲಿಯಲ್ಲಿ ರೋಹ್ಟಗಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಗಡಿ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಈವಿಚಾರ ಸುಪ್ರೀಂಕೋರ್ಟ್ ಮುಂದೆ ಇರುವುದರಿಂದ ನಾವು ಬಹಿರಂಗವಾಗಿ ಚರ್ಚೆ ಮಾಡುವುದರಿಂದ ಕೆಲವೊಮ್ಮೆ ವ್ಯತಿರಿಕ್ತ ಪರಿಣಾಮಗಳಾಗುತ್ತದೆ.ಅದೆಲ್ಲಾ ಸುಪ್ರೀಂಕೋರ್ಟ್ ನಲ್ಲೇ ತೀರ್ಮಾನವಾಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ನಕಲಿ ವೆಬ್ ಸೈಟ್ ಗಳಿವೆ ಇದರ ಮೂಲಕವೇ ಉಗ್ರ ಶಾರೀಕ್ ಕೂಡಾ ನಕಲಿ ಆದಾರ್ ಕಾರ್ಡ್ ಮಾಡಿಸಿದ್ದಾನಲ್ಲ ಎಂಬ ಪ್ರಶ್ನೆಗೆ ಹೌದು ಬೆಂಗಳೂರಲ್ಲಿ ಇಂತಹ ಬಹಳ ವೆಬ್ ಸೈಟ್ ಗಳಿವೆ, ಅವುಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಸಿಎಂ ತಿಳಿಸಿದರು.
ಒಕ್ಕಲಿಗರ ಮೀಸಲಾತಿ ವಿಚಾರಕ್ಕೆ ಡೆಡ್ ಲೈನ್ ಕುರಿತು ಪ್ರತಿಕ್ರಿಯಿಸಿ ಡೆಡ್ ಲೈನ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಅವರ ಲೆಟರ್ ನನ್ನ ಕೈ ಸೇರಲಿ. ನಾನು ಮುಂದೆ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು.
ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಪ್ರತಿಕ್ರಿಯಿಸಿ ಕೇಂದ್ರ ತಯಾರಿ ನಡೆಸಿದೆ. ನನ್ನೊಂದಿಗೆ ಕೇಂದ್ರದಿಂದ ಯಾರೂ ಸಮಾಲೋಚನೆ ಮಾಡಿಲ್ಲ.
ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಬೇಕೆಂಬುದು ನಮ್ಮ ಪಕ್ಷದ 30 ವರ್ಷಗಳ ನಿಲುವು. ಈ ಬಗ್ಗೆ ನಾನು ಸಹ ಎಲ್ಲಾ ರೀತಿಯ ಮಾಹಿತಿ ಕಲೆ ಹಾಕುತ್ತಿದ್ದೇನೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ತಿಳಿಸಿದರು.

