ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ -ಎಚ್ ಡಿ ಕೆ

ನೆಲಮಂಗಲ: ರಾಜ್ಯದಲ್ಲಿ ಜನತೆ ಬದಲಾವಣೆ ತರಲು ನಿರ್ಧರಿಸಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆ ಪ್ರವಾಸದ ಸಂದರ್ಭದಲ್ಲಿ ಜನತೆ ಬದಲಾವಣೆ ಬಯಸಿರುವುದು ಕಂಡುಬಂತು, ಇದು ಜನರ ನಾಡಿ ಮಿಡಿತ ಎಂದು ತಿಳಿಸಿದರು.

ನಮ್ಮ ಪಂಚರತ್ನ ಕಾರ್ಯಕ್ರಮಗಳು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜನಾಂಗದವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ನನ್ನ ಕೆಲವು ಮಾತನ್ನು ಸೋಶಿಯಲ್ ಮೀಡಿಯಾದಲ್ಲಿ ತಿರುಚಿ ಹೇಳಲಾಗುತ್ತಿದೆ. ಜನರ ದಾರಿ ತಪ್ಪಿಸೋ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಒಮ್ಮೆ ಮುಖ್ಯಮಂತ್ರಿಯಾಗಿದ್ದಾಗ ನಾನು ಕೆ.ಆರ್ ಪೇಟೆಗೆ ಭೇಟಿ ನೀಡಿದ್ದೆ. ಒಬ್ಬ ಬಾಲಕಿ ನನ್ನ ಕಾರು ತಡೆದು ಹೃದಯ ಕಾಯಿಲೆ ಇದೆ ಎಂದು ದುಃಖ ತೋಡಿಕೊಂಡು ಚಿಕಿತ್ಸೆ ಕೊಡಿಸಿ ಅಂತಾ ಮನವಿ ಮಾಡಿದ್ದಳು.

ಸಾ.ರಾ ಮಹೇಶ್‌ ಅವರಿಗೆ ಹೇಳಿ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿದೆ. ಆ ಬಾಲಕಿಗೆ ಸಿಎಂ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ ಚಿಕಿತ್ಸೆ ಕೊಡಿಸಿದ್ದೆ.

ಯಾವ ಸಿಎಂ ಆ ರೀತಿ ಮಾಡಿದ್ದಾರೆ ಅಂತ ಟೀಕೆ ಮಾಡುವವರು ಹೇಳಲಿ. ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ ಎಂಬುದನ್ನು ಕೃತಿಯಲ್ಲಿ ತೋರಿಸಿದ್ದೇನೆ ಎಂದು ಹೇಳಿದರು.

ನನ್ನ ಬಳಿ ಕಷ್ಟ ಹೇಳಿಕೊಳ್ಳಲು ಬರುವ ಹೆಚ್ಚು ಜನ ಶೋಷಿತ ಜನರೇ. ಅಂತಹ ಜನಕ್ಕೆ ಆರ್ಥಿಕ ಮತ್ತು ಶೈಕ್ಷಣಿಕ ಚೈತನ್ಯ ಕಲ್ಪಿಸುವುದೇ ನನ್ನ ಉದ್ದೇಶ. ಅದಕ್ಕೆ ಪಂಚರತ್ನ ಕಾರ್ಯಕ್ರಮ ರೂಪಿಸಿದ್ದೇನೆ ಎಂದು ಎಚ್ ಡಿ ಕೆ ತಿಳಿಸಿದರು.

ರಾಜಕೀಯವಾಗಿ ರಾಷ್ಟ್ರೀಯ ಪಕ್ಷಗಳು ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿವೆ. ದುರ್ಬಳಕೆ ಮಾಡಿಕೊಳ್ಳುವವರು ಬಿಜೆಪಿಯಂತವರು.‌ಇದಕ್ಕೆ ನಾನು ಹೆದರುವುದಿಲ್ಲ ಎಂದು ಹೇಳಿದರು

ಮಂಡೂರಿನಲ್ಲಿ ಘನತ್ಯಾಜ್ಯ ತೆರವಿಗೆ 900ಕೋಟಿ ರೂ ವ್ಯಯ ಆಗಿದೆಯಂತೆ. ಹೀಗೇ ತ್ಯಾಜ್ಯ ವಿಲೇವಾರಿ ಮಾಡಿದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಆದರೆ ಇಲ್ಲಿ ಕೆಲ ಮಾಫಿಯಾಗಳಿವೆ ಕಸದ ಸಮಸ್ಯೆಯನ್ನು ಪರಿಹರಿಸಲು ಬಿಡಲ್ಲ.ನಮ್ಮ ಸರ್ಕಾರ ಬಂದರೆ ಇದಕ್ಕೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಡಾ.ಕೆ.ಸುಧಾಕರ್ ನೆಲಮಂಗಲವನ್ನು ಉಪನಗರ ಮಾಡುವುದಾಗಿ ಹೇಳಿದ್ದಾರೆ. ಮೂರುವರೆ ವರ್ಷಗಳಿಂದ ಮಾಡದವರು, ಮೂರು ತಿಂಗಳಲ್ಲಿ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ನಾನು ಸಿಎಂ ಆಗಿದ್ದಾಗ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ಕೊಡುಗೆ ಏನು ಅಂತ ಡಾ.ಸುಧಾಕರ್ ಕೇಳಿದ್ದಾರೆ. ಆ ಜಿಲ್ಲೆ ರಚನೆ ಮಾಡಿದ್ದು ನಾನು. ಅವರಿಂದ ಸರ್ಟಿಫಿಕೇಟ್ ಪಡೆಯೋ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.