ಬೆಂಗಳೂರು: ಯಾವುದೇ ಕಾರಣಕ್ಕೂ ಅಪರಾಧ ಹಿನ್ನಲೆಯುಳ್ಳ ರೌಡಿಗಳನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ನಮ್ಮ ಈ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.
ರೌಡಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಾದ ಅಗತ್ಯ ನಮಗಿಲ್ಲ. ಅಂಥವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ರಾಜಕಾರಣ ಮಾಡಬೇಕಾದ ಅನಿವಾರ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್ಕುಮಾರ್ ಕಟೀಲ್ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ,ಹಾಗಾಗಿ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮಗೆ ಕಾನೂನಿನಲ್ಲಿ ಜಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರ ಹಾಕಿರುವ ಅರ್ಜಿಗೆ ಕಾನೂನಿನ ಮಾನ್ಯತೆ ಸಿಗುವ ಸಾಧ್ಯತೆ ಕಡಿಮೆ. ನಮ್ಮ ಸರ್ಕಾರದ ನಿಲುವು ಏನಿರಬೇಕೆಂಬ ಬಗ್ಗೆ ಕಾನೂನು ತಜ್ಞರ ಚರ್ಚೆ ಮಾಡಿದ್ದೇವೆ ಎಂದು ಸಿಎಂ ತಿಳಿಸಿದರು.
ವಕ್ ಬೋರ್ಡ್ನಿಂದ ಮುಸ್ಲಿಮ್ ಯುವತಿಯರಿಗೆ ಪ್ರತ್ಯೇಕ ಕಾಲೇಜು ತೆರೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕ ಕಾಲೇಜು ಬಗ್ಗೆ ನಮ್ಮ ಸರ್ಕಾರದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಇದು ನಮ್ಮ ಸರ್ಕಾರದ ನಿಲುವು ಆಗಿಲ್ಲ.
ಆ ಥರದ್ದು ಏನಾದರೂ ಪ್ರಸ್ತಾವನೆ ಇದ್ದರೆ ವಕ್ ಬೋರ್ಡ್ ಅಧ್ಯಕ್ಷರೇ ಬಂದು ನನ್ನ ಜತೆ ಚರ್ಚೆ ಮಾಡಲಿ ಎಂದು ಬೊಮ್ಮಾಯಿ ಹೇಳಿದರು.

