ಮೈಸೂರು: ಗಡಿ ವಿವಾದ ಕುರಿತು ಚರ್ಚೆ ನಡೆಸಲು ಕೇಂದ್ರ ಗೃಹ ಸಚಿವರು ಕರದಿರುವುದರಿಂದ ದೆಹಲಿಗೆ ಹೋಗುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಾಮರಾಜನಗರಕ್ಕೆ ತೆರಳಲು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬೊಮ್ಮಾಯಿ ಮಾತನಾಡಿದರು.
ಚಾಮರಾಜಕ್ಕೆ ಮುಖ್ಯಮಂತ್ರಿಯಾದ ಮೇಲೆ ಇದು ಮೂರನೇ ಬಾರಿಗೆ ಹೋಗುತ್ತಿದ್ದೇನೆ ಹಾಗಾಗಿ ಈಗ ಹೋಗುತ್ತಿರುವುದರಲ್ಲಿ ವಿಶೇಷವೇನಿಲ್ಲ ಎಂದು ತಿಳಿಸಿದರು.
ಚಾಮರಾಜನಗರವೂ ಕೂಡ ಕರ್ನಾಟಕದ ೩೧ ಜಿಲ್ಲೆಗಳಲ್ಲಿ ಮಹತ್ವದ ಜಿಲ್ಲೆಯಾಗಿದೆ ನಿಸರ್ಗಭರಿತ ಹಾಗೂ ಐತಿಹಾಸಿಕ ಜಿಲ್ಲೆ. ಎಷ್ಟು ಅಭಿವೃದ್ಧಿಗೆ ಮಹತ್ವಕೊಡಬೇಕೋ ಕೊಟ್ಟೇ ಕೊಡುತ್ತೇವೆ.ಮತ್ಯಾವ ವಿಷಯವೂ ನನ್ನ ತಲೆಯಲ್ಲಿ ಇಲ್ಲ ಎಂದು ಹೇಳಿದರು.
ದೆಹಲಿ ಭೇಟಿ ವೇಳೆ ಮಹಾರಾಷ್ಟ್ರ ಗಡಿ ಚರ್ಚೆ ಆಗತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಕೇಂದ್ರ ಗೃಹ ಸಚಿವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದಿರುವುದೇ ಅದಕ್ಕೋಸ್ಕರ ಆದ್ದರಿಂದ ನಮ್ಮ ನಿಲುವು ಏನೆಂಬುದನ್ನು ನಾವು ಹೇಳುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಈಗಾಗಲೇ ಸ್ಟೇಟ್ ರಿ ಆರ್ಗನೈಸೇಶನ್ ಆಕ್ಟ್ ಆದ ಮೇಲೆ ಏನೆಲ್ಲ ಪ್ರಕ್ರಿಯೆಗಳು ನಡೆಯಿತು, ಫೈನಲ್ ಆದ ನಂತರ ಏನಾಗಿದೆ, ಸುಪ್ರೀಂ ಕೋರ್ಟ್ ನಲ್ಲಿ ಈಗಿರುವ ಕೇಸ್ ವರೆಗೂ ಎಲ್ಲ ಮಾಹಿತಿಗಳನ್ನು ನಾನು ಗೃಹ ಸಚಿವರಿಗೆ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಪೊ೨೦೦೪ರಲ್ಲಿ ಆಗಿರುವುದನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ ಎಲ್ಲವನ್ನೂ ಗೃಹ ಕಾರ್ಯದರ್ಶಿಯವರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದರು.
ಮ್ಯಾಂಡೋಸ್ ಚಂಡಮಾರುತದಿಂದ ಕೆಲವು ತೊಂದರೆಗಳಾಗಿವೆ.ಸಮೀಕ್ಷೆ ಮಾಡಲಾಗುತ್ತಿದೆ.ಸಂಪೂರ್ಣವಾಗಿ ಕೃಷಿ ಇಲಾಖೆಯಿಂದ ಮಾಹಿತಿ ತರಿಸುತ್ತಿದ್ದೇನೆ ಎಂದು ತಿಳಿಸಿದರು.
ಸಚಿವ ಸಂಪೂಟ ವಿಸ್ತರಣೆ ಇದೆಯಾ ಎಂಬ ಪ್ರಶ್ನೆಗೆ ಅಫಿಶಿಯಲ್ ಆಗಿ ಇರುವಂತದ್ದು ಗಡಿ ವಿಚಾರ, ನಂತರ ಅವರೇನಾದರೂ ಪ್ರಸ್ತಾಪ ಮಾಡಿದರೆ ಸಿದ್ಧತೆ ಮಾಡಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಒಟ್ಟಿಗಾದರೂ ಹೋಗಲಿ, ಬೇರೆಯಾಗಿಯಾದರೂ ಹೋಗಲಿ ಆ ವಿಚಾರ ನಮಗೆ ಸಂಬಂಧಪಟ್ಟಿದ್ದಲ್ಲ, ಒಳಗಡೆ ಏನಿದೆ ಅಂತ ನೀವೇ ಪ್ರತಿದಿನ ವರದಿ ಮಾಡುತ್ತಿದ್ದೀರಿ ಅದರಲ್ಲಿ ನಾವು ಹೇಳುವಂಥದ್ದು ಏನೂ ಇಲ್ಲ ಪ್ರಶ್ನೆಯೊಂದಕ್ಕೆ ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಮಹದಾಯಿ ಯೋಜನೆ ಸಮಸ್ಯೆಯಾಗಲು ಕಾರಣ ಕಾಂಗ್ರೆಸ್ ಸರ್ಕಾರ, ಅವರ ಅಧಿನಾಯಕಿ ಸೋನಿಯಾ ಗಾಂಧಿ ಗೋವಾ ಚುನಾವಣೆಗೆ ಹೋದಾಗ ಮಹದಾಯಿ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಬಿಡಲ್ಲ ಅಂತ ಹೇಳಿದರು. ಅವರಿದ್ದಾಗ ಏನು ಮಾಡಿದರು ಗೋಡೆ ಕಟ್ಟಿದರು.
ಕೃಷ್ಣಾದಲ್ಲೂ ಅಷ್ಟೇ, ನಮ್ಮ ಹಕ್ಕನ್ನು ಪ್ರದಿಪಾದಿಸೋದಕ್ಕೆ ಮೀನಾಮೀಷ ನೋಡಿದವರು, ಇವರಿಗೆ ಯಾವ ನೈತಿಕ ಹಕ್ಕಿದೆ ನಮ್ಮನ್ನು ಪ್ರಶ್ನಿಸಲು ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದಾರೆ ಒಳಮೀಸಲಾತಿ ನಾವು ಅಧಿಕಾರಕ್ಕೆ ಬಂದರೆ ಕೊಡುತ್ತೇವೆ ಅಂತ, ಐದು ವರ್ಷ ಮುಖ್ಯಮಂತ್ರಿ ಆಗಿದ್ದರು, ಆ ವರದಿಯನ್ನು ಸಿದ್ದರಾಮಯ್ಯ ಮಂಡನೆ ಮಾಡೋ ಧೈರ್ಯ ಮಾಡಿಲಿಲ್ಲ.
ಎಸ್ ಎ, ಎಸ್ ಟಿ ಮೀಸಲಾತಿ ಗೊಂದಲ ಕುರಿತು ಪ್ರತಿಕ್ರಿಯಿಸಿ ಯಾವುದೂ ಗೊಂದಲವಿಲ್ಲ, ಗೊಂದಲವನ್ನು ಕಾಂಗ್ರೆಸ್ ನವರು ಸೃಷ್ಟಿಸುತ್ತಿದ್ದಾರೆ. ಎಸ್ ಸಿ, ಎಸ್ ಟಿ ಮತಗಳು ತಪ್ಪಿ ಹೋಗುತ್ತವಲ್ಲ ಅನ್ನೋ ಭಯದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

