ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಹೇಗೆ ಟಿಪ್ಪು ಎಂಬ ಐಕಾನ್ ಇದ್ದನೋ ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಒಬ್ಬ ಐಕಾನ್ನನ್ನು ಹುಡುಕಿಕೊಂಡಿದ್ದಾರೆ ಎಂದು ಬಿಜೆಪಿ ಕುಟುಕಿದೆ.
ರಾಷ್ಟ್ರ ವಿರೋಧಿ ಕಾಂಗ್ರೆಸ್ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ಅವನೇ ಕುಕ್ಕರ್ ಬ್ಲಾಸ್ಟ್ ಆರೋಪಿ, ಡಿಕೆಶಿ ಬ್ರದರ್ ಶಾರಿಕ್! ಎಂದು ಟೀಕಿಸಿದೆ.
ಸಮುದಾಯಗಳ ಓಲೈಕೆಯಲ್ಲಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿದಿದೆಯೆಂದರೆ, ಉಗ್ರಗಾಮಿಗಳನ್ನೂ ಮಾವನ ಮಗನಂತೆ ನೋಡುತ್ತದೆ.
ಕಾರಣ ಇಷ್ಟೇ ಉಗ್ರಗಾಮಿ ಮಸೂದ್ ಅಝರ್ ನನ್ನು ಜೀ ಎಂದು ಗೌರವಿಸಿದ ರಾಹುಲ್ ಗಾಂಧಿಯನ್ನು ಖುಷಿಪಡಿಸಲು ಈಗ ಡಿಕೆಶಿ ಉಗ್ರಗಾಮಿಗೇ ಕ್ಲೀನ್ ಚಿಟ್ ಕೊಡುತ್ತಿದ್ದಾರೆ ಎಂದು ಕಿಡಿಯಾಡಿದೆ.
ದಿನ ಬೆಳಗಾದರೆ ಎಣ್ಣೆ ಸೀಗೇಕಾಯಿಯಂತೆ ಒಬ್ಬರ ಮೇಲೊಬ್ಬರು ಸಿಡಿದು ಬೀಳುತ್ತಿರುವ ಡಿಕೆಶಿ ಮತ್ತು ಸಿದ್ದರಾಮಯ್ಯ ಈಗ ಮತ್ತೆ ಒಂದಾಗಿರುವುದು ಒಂದೇ ಒಂದು ಉದ್ದೇಶಕ್ಕೆ.
ಅದು ಶಾರಿಕ್ ನನ್ನು ಅಮಾಯಕ ಎಂದು ತೋರಿಸಿ, ಅವರ ಮನೆಯ 4 ವೋಟುಗಳನ್ನು ತೆಗೆದುಕೊಳ್ಳುವುದು! ಸಿದ್ದರಾಮಯ್ಯನವರ ತುಷ್ಟೀಕರಣದ ರಾಜಕಾರಣದಿಂದ ಪಿಎಫ್ಐನಂಥ ಉಗ್ರಗಾಮಿ ಸಂಘಟನೆ ಬೆಳೆದು ನಿಂತಿತ್ತು ಎಂದು ದೂರಿದೆ.
ಈಗ ಡಿಕೆಶಿ ಶಾರಿಕ್ ನಂತವನನ್ನು ಬೆಂಬಲಿಸಿ ಪಿಎಫ್ಐ ಭಾಗ 2 ಬೆಳೆಸುವ ಆಲೋಚನೆ ಏನಾದರೂ ಇದ್ದರೆ ಬಿಡುವುದು ಒಳ್ಳೆಯದು. ಏಕೆಂದರೆ ಸಿಎಂ ಬೊಮ್ಮಾಯಿಯವರ ಸರ್ಕಾರ ಅದನ್ನೂ ಬ್ಯಾನ್ ಮಾಡುತ್ತದೆ ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ನಲ್ಲಿ ಕೇವಲ ಡಿಕೆಶಿ ಮಾತ್ರ ಉಗ್ರರ ಬೆಂಬಲಿಗ ಎಂದುಕೊಂಡರೆ ಅದು ತಪ್ಪಾಗುತ್ತದೆ. ಉಗ್ರ ಬೆಂಬಲಿಗ ಡಿಕೆಶಿ ಬೆಂಬಲಕ್ಕೆ ಮರಿ ಖರ್ಗೆಯೂ ನಿಂತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಇಡೀ ಕಾಂಗ್ರೆಸ್ಸೇ ಒಟ್ಟಾಗಿ ಉಗ್ರರ ಪರ ಮೇಣದ ಬತ್ತಿಯ ಮೆರವಣಿಗೆ ಮಾಡಿದರೂ ಅಚ್ಚರಿಯೇನಿಲ್ಲ ಎಂದು ವ್ಯಂಗ್ಯವಾಡಿದೆ.

