ಕಾಂಗ್ರೆಸ್ ಗೆಲ್ಲುವ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚು -ಡಿಕೆಶಿ

ಬೆಳಗಾವಿ: ಬೇರೆ ಪಕ್ಷಗಳು ಸೋಲುತ್ತವೆ ಎಂಬ‌‌ ಕಾರಣಕ್ಕೆ ಅಲ್ಲಿ ಟಿಕೆಟ್ ಆಕಾಂಕ್ಷಿಗಳು ಕಡಿಮೆ ಇದ್ದಾರೆ.ನಮ್ಮ ಪಕ್ಷ ಗೆಲ್ಲುವ ಹಿನ್ನೆಲೆಯಲ್ಲಿ ನಮ್ಮಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ‌ ಅವರು,ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತ ಮೂಡಿಸಿ ಅಭ್ಯರ್ಥಿ ಆಯ್ಕೆಗಾಗಿ ಅರ್ಜಿಗಳನ್ನು ಸ್ಥಳೀಯ ಜಿಲ್ಲೆಗಳಿಗೆ ರವಾನಿಸಲಾಗಿದೆ ಎಂದು ಹೇಳಿದರು.

ಸರ್ಕಾರಕ್ಕೆ ಪಂಚಮಸಾಲಿ ಮೀಸಲಾತಿ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಲುವೇನು ಎಂಬ ಪ್ರಶ್ನೆಗೆ ನಮ್ಮ ನಾಯಕರು ಈ ವಿಚಾರವಾಗಿ ಮಾತನಾಡಿದ್ದಾರೆ. ಉಳಿದಂತೆ ಯಾರೂ ಬಂದು ನಮ್ಮ ಬಳಿ ಚರ್ಚೆ ಮಾಡಿಲ್ಲ ಎಂದು ಡಿಕೆಶಿ ಉತ್ತರಿಸಿದರು.

ಸರ್ಕಾರ ಮೊದಲು ನಿಲುವು ಪ್ರಕಟಿಸಲಿ. ಕಾನೂನು ಅಡಚಣೆಗಳೇನು ಎಂಬುದು ಗೊತ್ತಿಲ್ಲ. ಈ ವಿಚಾರವಾಗಿ ಆಡಳಿತ ಪಕ್ಷ ತೀರ್ಮಾನ ಮಾಡಬೇಕು. ಕಾನೂನು ಏನಿದೆ ಎಂದು ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ತಿಳಿಸಿದರು.

ಮೀಸಲಾತಿ ಹೆಚ್ಚಳ ಮಸೂದೆ ಮಂಡನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಸರ್ಕಾರ ತರಾತುರಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿದೆ. ಅವರಿಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಿ ತಿದ್ದುಪಡಿ ತರಲಿ.

ಹೇಗಿದ್ದರೂ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ಕಾನೂನನ್ನು ಅಲ್ಲಿಗೆ ಕಳುಹಿಸಿ, ಅನುಮೋದನೆ ಪಡೆಯಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.