ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ವ್ಯಾಪಕವಾಗಲಿ -ಗಣಪತಿ ಶ್ರೀ

ಮೈಸೂರು: ವಿವಿಧ ಸಂಘಗಳು ಮತ್ತು ಸರಕಾರೇತರ ಸಂಘಟನೆಗಳ ಶ್ರಮದಿಂದ ಇತ್ತೀಚೆಗೆ ರಕ್ತದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ ಆದರೂ ಇನ್ನೂ ಹೆಚ್ಚು ವ್ಯಾಪಕವಾಗಬೇಕಿದೆ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.

ಜೀವದಾರ ರಕ್ತನಿಧಿ ಕೇಂದ್ರದ ರಕ್ತದಾನ ಜಾಗೃತಿ ವುಳ್ಳ 2023ರ ಕ್ಯಾಲೆಂಡರ್ ಅನ್ನು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ  ಬಿಡುಗಡೆಗೊಳಿಸಿ ಶ್ರೀಗಳು ಮಾತನಾಡಿದರು.

ಈ ಹಿಂದಿನ ದಿನಮಾನಗಳಿಗೆ ಹೋಲಿಸಿದ್ದಲ್ಲಿ ಕಳೆದ ದಶಕದಲ್ಲಿ ರಕ್ತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿದೆ.

ಕಾಲೇಜುಗಳ ಎನ್ ನೆಸ್ ಎಸ್ ಮತ್ತು ಎನ್‌ಸಿಸಿ ಕೆಡೆಟ್‌ಗಳಿಗೆ ಸೀಮಿತವಾಗಿದ್ದ ರಕ್ತದಾನ ಶಿಬಿರ ಇಂದು ಅನೇಕ ಸರಕಾರೇತರ ಸಂಘಟನೆಗಳು ಮತ್ತು ಯುವಕ ಮಂಡಳಿಗಳು ರಕ್ತದಾನ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಗೀತ ಆಲಿಸುವುದು, ಪ್ರವಾಸ ಮತ್ತು ಇತರ ಹವ್ಯಾಸಗಳಂತೆ ಇತ್ತೀಚೆಗೆ ರಕ್ತದಾನ ಮಾಡುವುದು ಸಹ ಕೆಲ ಯುವಕರ ಹವ್ಯಾಸವಾಗಿದೆ.

ಈ ಬಗೆಯ ಸಕಾರಾತ್ಮಕ ಬೆಳವಣಿಗೆಗಳು ಆರೋಗ್ಯ ಕ್ಷೇತ್ರದ ಬಹು ದೊಡ್ಡ ಸವಾಲಾಗಿದ್ದ ರಕ್ತದ ಕೊರತೆ ನೀಗಿಸುತ್ತಿವೆ ಎಂದು ಶ್ರೀಗಳು ಅಭಿಪ್ರಾಯ ಪಟ್ಟರು.

ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಕೇಬಲ್ ಮಹೇಶ್, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿಕಾಸ್ ಶಾಸ್ತ್ರಿ, ಮಂಜುನಾಥ್ ಮತ್ತಿತರರು ಹಾಜರಿದ್ದರು.