ಸ್ಟೌ‌ ಹಚ್ಚಿದಾಗ‌ ಬೆಂಕಿ ಹೊತ್ತಿಕೊಂಡು ಆರು ಮಂದಿಗೆ ಗಾಯ (Video)

ಮೈಸೂರು: ಕಾಫಿ ಮಾಡಲು ಸ್ಟೌ‌ ಹಚ್ಚಿದಾಗ‌ ಬೆಂಕಿ ಹೊತ್ತಿಕೊಂಡು ಆರು ಮಂದಿ ಗಂಭೀರವಾಗಿ ‌ಗಾಯಗೊಂಡಿರುವ ಘಟನೆ ಎನ್.ಆರ್.ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರಿನ ಬನ್ನಿಮಂಟಪದಲ್ಲಿರುವ ಅಗ್ನಿಶಾಮಕ ಸಿಬ್ಬಂದಿಗಳ ವಸತಿ ನಿಲಯದ ಫೈರ್ ಮನ್ ಮಹದೇವಪ್ಪ ಅವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ಮಹದೇವಪ್ಪ(36)ಅವರ ಪತ್ನಿ ಗೀತಾ(32) ಮಕ್ಕಳಾದ ಮೌನಶ್ರೀ(10)ಮಿಥುನ(5) ಹಾಗೂ ನೆರೆಮನೆಯವರಾದ ಸವಿತಾ ಮತ್ತು ಭಾಗ್ಯಮ್ಮ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಿಗ್ಗೆ ಕಾಫಿ ಮಾಡಲು ಸ್ಟೌ ಹತ್ತಿಸುವಾಗ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಮನೆಗೆ ವ್ಯಾಪಿಸಿದೆ.

ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಧಾವಿಸಿ ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಯ ಪೀಠೋಪಕರಣಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.ಅನಿಲ ಸೋರಿಕೆ ಬೆಂಕಿ ಅವಘಢಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ.

ಎನ್.ಆರ್.ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.