ದಲಿತರ ಬಗ್ಗೆ‌ ಬಿಜೆಪಿಯದು ಧೃತರಾಷ್ಟ್ರ ಪ್ರೇಮ: ದೃವ ನಾರಾಯಣ್ಆರೋಪ

ಮೈಸೂರು: ಬಿಜೆಪಿಯವರು ದಲಿತರ ಬಗ್ಗೆ ಧೃತರಾಷ್ಟ್ರ ಪ್ರೇಮ ತೋರುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧ್ರುವ ನಾರಾಯಣ್ ದೂರಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಮಹಾಭಾರತದಲ್ಲಿ ಧೃತರಾಷ್ಟ್ರ ಭೀಮನನ್ನು ನಾಶ ಮಾಡುವ ಉದ್ದೇಶದಿಂದ ತುಂಬಿದ ಸಭೆಯಲ್ಲಿ ಆಲಿಂಗನದ ಆಸೆಯನ್ನು ವ್ಯಕ್ತಪಡಿಸುತ್ತಾನೆ ಎಂದು ಹೇಳಿದರು.

ಮನದೊಳಗೆ ದ್ವೇಷ ಇಟ್ಟುಕೊಂಡು, ಮೇಲ್ನೋಟಕ್ಕೆ ಪ್ರೀತಿ ತೋರಿಸುತ್ತಿದ್ದ ಧೃತರಾಷ್ಟ್ರನ ಮರ್ಮವನ್ನು ಅರಿತ ಶ್ರೀಕೃಷ್ಣ, ಭೀಮನಂತೆಯೆ ಕಂಚಿನ ಪ್ರತಿಮೆಯನ್ನು ಮಾಡಿ ಧೃತರಾಷ್ಟ್ರನ ಮುಂದೆ ನಿಲ್ಲಿಸಿದ.

ಆಗ ದೃತರಾಷ್ಟ್ರಪ್ರತಿಮೆಯನ್ನು ಆಲಂಗಿಸುವ ಬದಲು ತನ್ನ ಮುಷ್ಠಿಯಿಂದ ಅದನ್ನು ಪುಡಿಪುಡಿ ಮಾಡುತ್ತಾನೆ.

ಈಗ ದಲಿತರ ಬಗ್ಗೆ ಬಿಜೆಪಿಯ ಉದ್ದೇಶವೂ ಇದೇ ಆಗಿದೆ ಎಂದು ಧ್ರುವನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು.

ದಲಿತರನ್ನು ಅಪ್ಪಿಕೊಳ್ಳುವ ಆಸೆ ತೋರುತ್ತಾ ಅವರನ್ನು ನಾಶ ಮಾಡಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದರು.

ಚುನಾವಣೆ ಬಂದಾಗ ದಲಿತರನ್ನು ಸ್ಮರಿಸೋದು, ಅಧಿಕಾರಕ್ಕೆ ಬಂದ ಮೇಲೆ  ಶೋಷಿಸುವುದು ಬಿಜೆಪಿಯ ಸಂಸ್ಕೃತಿಯಾಗಿದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಬಸವರಾಜ ಬೊಮಾಯಿ ಮಾಡಿರುವ ಆರೋಪಗಳು ಸವಕಲು ನಾಣ್ಯವಾಗಿದೆ.

ಬಿಜೆಪಿಯು ಖಾಸಗೀಕರಣದ ನೀತಿಯನ್ನು ಅನುಸರಿಸುವ ಮೂಲಕ ಮೀಸಲಾತಿ ಪದ್ಧತೆಯನ್ನು ಅರ್ಥಹೀನಗೋಸುತ್ತಿದೆ.

ಬಿಜೆಪಿಯಲ್ಲಿ ದಲಿತರು ಸಿಎಂ ಹುದ್ದೆ ಹೇಳುವ ಕಾಲವೇ ಇನ್ನು ಬಂದಿಲ್ಲ. ಆದರೆ, ಕಾಂಗ್ರೆಸ್ನಲ್ಲಿ ಕೂಗು ಬಹಳ ದಿನಗಳಿಂದ ಇದೆ.

ದೇಶದಲ್ಲಿ ಮೊದಲು ದಲಿತರನ್ನ ಮುಖ್ಯಮಂತ್ರಿ ಮಾಡಿದ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್.

ಕರ್ನಾಟಕದಲ್ಲೂ ದಲಿತರೊಬ್ಬರು ಮುಖ್ಯಮಂತ್ರಿ ಆಗುವುದಾದರೆ ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಧ್ರುವನಾರಾಯಣ್ ಹೇಳಿದರು.