ಮೈಸೂರು,ಜ.೧೫ – ಈಗಾಗಲೇ ಯೋಗ ಹಬ್ ಎಂದು ಹೆಸರು ಪಡೆದಿರುವ ಮೈಸೂರಿನಲ್ಲಿ ೧.೫ ಲಕ್ಷ ಜನರಿಂದ ಯೋಗ ಮಾಡಿಸುವ ಮೂಲಕ ವಿಶ್ವ ದಾಖಲೆ ಬರೆಯೋಣ ಎಂದು ಶಾಸಕರಾದ ಎಸ್.ಎ.ರಾಮದಾಸ್ ಹೇಳಿದರು.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಯುವಜನ ಸೇವಾ ಇಲಾಖೆ, ಆಯುಷ್ ಇಲಾಖೆ,ನೆಹರು ಯುವಕ ಕೇಂದ್ರ,ಎನ್.ಎನ್.ಎಸ್ ಘಟಕ ಮೈಸೂರು ಇವರುಗಳು ಸಂಯುಕ್ತಾಶ್ರಯದಲ್ಲಿ ನಡೆದ ಯೋಗಥಾನ್-೨೦೨೩ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಬಾಬಾ ರಾಮದೇವ್ ಅವರು ಹರಿದ್ವಾರದಲ್ಲಿ ೧ ಲಕ್ಷ ಜನರಿಂದ ಯೋಗ ಮಾಡಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದು, ನಾವು ೨೦೨೩ ರ ಜೂನ್ ೨೧ರ ವಿಶ್ವ ಯೋಗ ದಿನದಂದು ಬಾಬಾ ರಾಮದೇವ್ ಅವರನ್ನು ಮೈ ಸೂರಿಗೆ ಆಹ್ವಾನಿಸಿ ೧.೫ ಲಕ್ಷ ಜನರಿಂದ ಯೋಗ ಮಾಡಿಸುವ ಮೂಲಕ ವಿಶ್ವ ದಾಖಲೆ ಬರೆಯೋಣ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ೩೫ ಸಾವಿರ ಜನರೊಂದಿಗೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ,ಇಂತಹ ದಟ್ಟ ಮಂಜಿನ ನಡುವೆಯೂ ನೆರೆದಿರುವ ತಮ್ಮೆಲ್ಲರ ಉತ್ಸಾಹ ಪ್ರೇರಣಾ ದಾಯಕ ಎಂದರು.
ಸೂರ್ಯ ಉತ್ತರ ದಿಕ್ಕಿನಿಂದ ದಕ್ಷಿಣದ ಕಡೆಗೆ ಸಂಚರಿಸುವ ಮಕರ ಸಂಕ್ರಾಂತಿಯ ಈ ದಿನ ಬಹಳ ಪ್ರಾಶಸ್ತ್ಯ ವಾದ ದಿನ ಅಂತಹ ದಿನದಂದು ತಾಯಿ ಸನ್ನಿಧಿಯಲ್ಲಿ ನಾವೆಲ್ಲರೂ ಸೇರಿ ಯೋಗ ಮಾಡುತ್ತಿರುವುದು ನಮ್ಮ ಸುಯೋಗವೇ ಸರಿ ಎಂದರು.
ಇಂದು ಬಹಳ ವಿಶಿಷ್ಟ ಘಟನೆಗಳು ಜರುಗಿದ ದಿನ, ಕುರುಕ್ಷೇತ್ರ ಯುದ್ದದಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರು ಇಚ್ಚಾಮರಣ ಹೊಂದಿದ ದಿನ ಹಾಗೂ ಭಗೀರಥ ಮುನಿಗಳು ಗಂಗೆಯನ್ನು ಭೂಲೋಕಕ್ಕೆ ತಂದ ದಿನ ವೈಙ್ನಾನಿಕವಾಗಿಯೂ ಬಹಳ ಮಹತ್ವದ ದಿನವಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಇಂತಹ ಪ್ರತಿಕೂಲ ಹವಾಮಾನ ದ ನಡುವೆ ಇಷ್ಟೊಂದು ಸಂಖ್ಯೆಯ ಯೋಗ ಪಟು ಗಳು ಸೇರಿರುವುದು ಸಂತೋಷಕರ ವಿಚಾರ. ಚಿಕ್ಕವರಿಂದ ಹಿಡಿದು ದೊಡ್ಡವರೆಲ್ಲ ನೆರದಿದ್ದೀರಿ, ಯೋಗಥಾನ್ ಈ ಹಿಂದೆಯೇ ಆಗಬೇಕಿತ್ತು ತಡವಾದರೂ ಯಶಸ್ವಿಯಾಗಿದೆ
ಪ್ರಧಾನ ಮಂತ್ರಿಯವರು ಮೈಸೂರಿನ ಯೋಗ ಕಾರ್ಯಕ್ರಮಕ್ಕೆ ಬಂದು ಹೋದ ನಂತರ ಪ್ರವಾಸೋದ್ಯಮ ಸಾಕಷ್ಟು ಉತ್ತೇಜನಕಾರಿಯಾಗಿದೆ.ಯೋಗ ನಮ್ಮನ್ನು ಬಹಳಷ್ಟು ದೈಹಿಕ ಹಾಗೂ ಮಾನಸಿಕವಾಗಿ ಸಧೃಢಗೊಳಿಸುತ್ತದೆ ಎಂದರು.
ಪೂಜ್ಯ ಮಹಾಪೌರರಾದ ಶಿವಕುಮಾರ್ ಅವರು ಯೋಗ ಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು
ಕಾರ್ಯಕ್ರಮದಲ್ಲಿ ಉಪ ಮಹಾಪೌರರಾದ ರೂಪ ಯೋಗೀಶ್,ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್,ಸೀಮಾ ಲಾಟ್ಕರ್,ಸಿಇಒ ಪೂರ್ಣಿಮಾ,ಅಪರ ಜಿಲ್ಲಾಧಿಕಾರಿ ಲೋಕನಾಥ್,ಮೈಸೂರು ಯೋಗ ಫೆಡರೇಷನ್ ಅಧ್ಯಕ್ಷ ಯೋಗೀಶ್ ಇದ್ದರು.

