ಗಣಿ ಹಗರಣದಲ್ಲಿ ಮೂರೂ ಪಕ್ಷಗಳು ಭಾಗಿ: ಅದಕ್ಕಾಗಿ ವರದಿ ಜಾರಿಗೆ ತರಲಿಲ್ಲ – ಸಂತೋಷ್  ಹೆಗಡೆ ಬೇಸರ

ಮೈಸೂರು: ಅಧಿಕಾರದಲ್ಲಿದ್ದಾಗ ನಾನು ಗಣಿ ಹಗರಣದ ಬಗ್ಗೆ ವರದಿ ನೀಡಿದ್ದೆ. ಹಗರಣದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನವರು ಭಾಗಿ ಆಗಿದ್ದಾರೆ. ಹಾಗಾಗಿ ಇದುರೆಗೂ ವರದಿಯನ್ನು ಜಾರಿಗೆ ತಂದಿಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗಡೆ ಬೇಸರ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವರದಿಯನ್ನು ಜಾರಿಗೊಳಿಸಿದರೆ ಮೂರು ಪಕ್ಷದ ರಾಜಕಾರಣಿಗಳಿಗೆ ಶಿಕ್ಷೆ ಆಗುತ್ತದೆ.ಆದ್ದರಿಂದಲೇ ಅದನ್ನು ಜಾರಿಗೆ ತರುವ ಕೆಲಸವನ್ನು ಯಾವ ಸರಕಾರವು ಮಾಡುತ್ತಿಲ್ಲ  ಎಂದು ಹೇಳಿದರು.

1950 ರಿಂದ ಈವರೆಗೂ ಎಲ್ಲ ದಶಕಗಳಲ್ಲಿಯೂ ಒಂದೊಂದು ದೊಡ್ಡ ಹಗರಣಗಳು ಆಗಿದೆ. ಇದರಿಂದ ಸರಕಾರಕ್ಕೆ ಕೋಟ್ಯಾಂತರ ರೂ. ನಷ್ಡ ಆಗುತ್ತಿದೆ ಇದು ಹೀಗೇ ಮುಂದುವರಿದೃ ದೇಶದಲ್ಲಿ ಅಭಿವೃದ್ಧಿ ಹೇಗೆ ಸಾಧ್ಯ ಎಂದವರು ಪ್ರಶ್ನಿಸಿದರು.

ಎಲ್ಲ ಕ್ಷೇತ್ರಗಳಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಎಲ್ಲ ಕ್ಷೇತ್ರದಲ್ಲಿನ ಹುದ್ದೆಯಲ್ಲಿಯೂ ದುರಾಸೆ ಇದೆ ದುರಾಸೆ ಹೋಗುವವರೆಗೆ ಭ್ರಷ್ಟಾಚಾರ ನಿಲ್ಲುವುದಿಲ್ಲ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಉಂಟಾಗುವುದಿಲ್ಲ ಎಂದು ತಿಳಿಸಿದರು.

ಭ್ರಷ್ಟಾಚಾರದ ಪಿಡುಗು ಕೇವಲ ಸರಕಾರ ಮಟ್ಟದಲ್ಲಿ ಮಾತ್ರ ಅಲ್ಲ ಅದೂ ಖಾಸಗಿ ಸಂಸ್ಥೆಗಳಲ್ಲಿ,ಹಾಗೂ ಮಾಧ್ಯಮ ಕ್ಷೇತ್ರದಲ್ಲೂ ತಾಂಡವವಾಡುತ್ತಿದೆ ಎಂದರು.

ಭ್ರಷ್ಟಾಚಾರ ನಿಯಂತ್ರಣ ಆಗದಿದ್ದರೆ ಮುಂದೆ ಸಮಾಜದಲ್ಲಿ ದಂಗೆ ಆಗುತ್ತದೆ ಎಂದು ಸಂತೋಷ್ ಹೆಗಡೆ ಎಚ್ಚರಿಸಿದರು.

ಈಗಿನ ಸಮಾಜದಲ್ಲಿ ಅಧಿಕಾರ,ಶ್ರೀಮಂತಿಕೆಯನ್ನು ಪೂಜಿಸುತ್ತಾರೆ,ಹಿಂದೆ ಜೈಲಿಗೆ ಹೋಗಿ ಬಂದವರ ಮನೆಯವರನ್ನೇ ಬಹಿಷ್ಕಾರ ಹಾಕಲಾಗುತ್ತಿತ್ತು.

ಈಗ ಜೈಲಿಗೆ ಹೋಗಿ ಬಂದವರನ್ನ ಹೂಮಾಲೆ ಹಾಕಿ ಜೈಕಾರ ಹಾಕಿ ಸ್ವಾಗತಿಸ್ತಾರೆ ಹಾಗಾಗಿದೆ ನಮ್ಮ ಸಮಾಜ ಎಂದು ಬಹಳ ಬೇಸರ ಪಟ್ಟರು.

ಚೀನಾದಲ್ಲಿ ಬ್ರಷ್ಟರಿಗೆ ಗಲ್ಲು ಶಿಕ್ಷೆ ಕೊಡುತ್ತಾರೆ, ಆದರೆ ನಮ್ಮಲ್ಲಿ ಕೇವಲ ಏಳು ವರ್ಷ ಜೈಲು ಶಿಕ್ಷೆ ಇದೆ.ಎಲ್ಲಾ ಮುಗಿದು ಆತ ಜೈಲಿಗೆ ಹೋಗೋದರೊಳಗೆ ಆತನಿಗೆ ಎಪ್ಪತ್ತು ವರ್ಷ ಆಗಿಬಿಡುತ್ತದೆ,ಆಗ ಇನ್ಯಾವ ಶಿಕ್ಷೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ರವಿಕುಮಾರ್, ಸುಬ್ರಮಣ್ಯ, ಧರ್ಮಪುರ ನಾರಾಯಣ, ರಂಗಸ್ವಾಮಿ ಉಪಸ್ಥಿತರಿದ್ದರು.