ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವಕ್ಕೆ ಇಂದು ಬೆಳಿಗ್ಗೆ ವೈಭವಯುತ ಚಾಲನೆ ಸಿಕ್ಕಿತು.
ಬೆಳಿಗ್ಗೆ 8 ಗಂಟೆಗೆ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ವಿಷ್ಣು ಸಹಸ್ರ ಪಠಣ ನಡೆಯಿತು.
ಆ ನಂತರ ಶ್ರೀ ಸ್ವಾಮೀಜಿಯವರು ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯದಿಂದ ಸಾಲಂಕೃತ ರಥದಲ್ಲಿ ಭವ್ಯ ಮೆರವಣಿಗೆ ಮೂಲಕ ನಾದ ಮಂಟಪಕ್ಕೆ ಆಗಮಿಸಿದರು.
ಗಾರುಡಿ ಗೊಂಬೆಗಳು, ಪೂಜಾ ಕುಣಿತ, ಪಟದ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ಮೇಳ ಮುಂದೆ, ಮುಂದೆ ಸಾಗಿದವು.
ಹಿಂದೆ ಪೂರ್ಣಕುಂಬ ಹೊತ್ತ ಮಹಿಳೆಯರು ಸಾಗುತ್ತಿದ್ದರೆ ಶ್ರೀ ಲಕ್ಷ್ಮೀ ಸಮೇತ ಶ್ರೀ ದತ್ತ ವೆಂಕಟೇಶ್ವರ, ಶ್ರೀ ಆಂಜನೇಯ, ಪಾರ್ವತಿದೇವಿಯ, ಉತ್ಸವ ಮೂರ್ತಿಯೊಂದಿಗೆ ಗೋವು, ಕುದರೆ ಮೆರವಣಿಗೆಯಲ್ಲಿ ಸಾಗಿದವು.
ಈ ಮೆರವಣಿಗೆಯ ಮಧ್ಯೆ ರಥದಲ್ಲಿ ಆಸೀನರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರನ್ನು ಋತ್ವಿಕರುಗಳು ಹಾಗೂ ಅವಧೂತ ದತ್ತಪೀಠದ ಕಿರಿಯ ಸ್ವಾಮೀಜಿಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ನಾದ ಮಂಟಪಕ್ಕೆ ಕರೆತಂದರು.
ನಾದಮಂಟಪದ ಮುಂಭಾಗದಲ್ಲಿ ಜಾನಪದ ಕಲಾತಂಡಗಳು ತಮ್ಮ ಸಾಂಪ್ರದಾಯಿಕ ಕುಣಿತವನ್ನು ಪ್ರದರ್ಶಿಸಿದುದು ಎಲ್ಲರ ಮನ ಸೂರೆಗೊಂಡಿತು. ಅದರಲ್ಲೂ ವೀರಗಾಸೆ, ತಾಂಡವ ನೃತ್ಯ ಎಲ್ಲರನ್ನು ಆಕರ್ಶಿಸಿತು.
ನಂತರ ನಾದಮಂಟಪದಲ್ಲಿ ವಾರಂಗಲ್ ನ ಗೋವಿಂದಸ್ವಾಮಿ ದೇವಾಲಯದಿಂದ ತರಲಾಗಿದ್ದ ತೀರ್ಥ ಸೇರಿದಂತೆ ವಿವಿಧ ದೇವಾಲಯಗಳಿಂದ ತೀರ್ಥ ವನ್ನು ಪೂಜ್ಯ ಸ್ವಾಮೀಜಿಯವರಿಗೆ ನೀಡಲಾಯಿತು.
ಸ್ವಾಮೀಜಿಯವರು ಹಲವು ದೇವಾಲಯಗಳಿಂದ ಆಗಮಿಸಿದ್ದ ಋತ್ವಿಕರನ್ನು ಹಾಗೂ ವಿದ್ವಾಂಸರನ್ನು ಗೌರವಿಸಿದರು.
ನಂತರ ಕೃಚುರಾಛರಣ, ದಾನಸಂಕಲ್ಪದೊಂದಿಗೆ ಕೂಷ್ಮಾಂಡ ಹೋಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿ ಈ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ಪುಣ್ಯದ ಕೆಲಸ ಎಂದು ಹೇಳಿದರು.
ಸಾಮಾನ್ಯ ಮನುಷ್ಯರು ಮಾಡಿಕೊಳ್ಳುವ ಸಹಸ್ರ ಚಂದ್ರ ದರ್ಶನ ಶಾಂತಿಯಲ್ಲಿ ಭಾಗವಹಿಸುವುದೇ ಇಷ್ಟು ಪುಣ್ಯದ ಕೆಲಸ.ಅಂತಹುದರಲ್ಲಿ ಆಧ್ಯಾತ್ಮಿಕ ಮೇರು ಪರ್ವತದಂತಿರುವ ಗುರು ನಮ್ಮ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಅತ್ಯಂತ ಪುಣ್ಯ ಎಂದು ತಿಳಿಸಿದರು.
ಭಕ್ತರು ಆಶ್ರಮದಲ್ಲಿ ಹಮ್ಮಿಕೊಂಡಿರುವ ಸಕಲ ದೇವತಾ ಹೋಮ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಕಿರಿಯ ಶ್ರೀಗಳು ಮನವಿ ಮಾಡಿದರು.
ಕೂಷ್ಮಾಂಡ ಹೋಮ ಮೂರು ಬಾರಿ ನಡೆಯಲಿದ್ದು ಸಂಜೆ ಪವಮಾನ ಹೋಮ ಕೂಡಾ ನೆರವೇರಲಿದೆ.

