ಮೈಸೂರು: ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ,ಉಪಾಧ್ಯಕ್ಷರ ಚುನಾವಣೆಯನ್ನು ಏಕಾಏಕಿ ಮುಂದೂಡಿದ್ದನ್ನು ಖಂಡಿಸಿ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಆಯುಕ್ತರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗುರುವಾರ ಬೆಳಿಗ್ಗೆ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯನ್ನು ನಡೆಸಲು ನಿರ್ಧರಿಸಲಾಗಿತ್ತು.
ಆದರೆ 12 ಗಂಟೆಯಾದರೂ ಮೇಯರ್ ಆಗಲೀ ಆಡಳಿತ ಪಕ್ಷದ ಸದಸ್ಯರಾಗಲಿ ಬರಲೇ ಇಲ್ಲ. ಇದರಿಂದ ಕೆರಳಿದ ಪ್ರತಿ ಪಕ್ಷದ ಕಾಂಗ್ರೆಸ್ ಸದಸ್ಯರು ಚುನಾವಣೆ ನಡೆಯಲೇ ಬೇಕೆಂದು ಪಟ್ಟು ಹಿಡಿದರು.
ಅಷ್ಟರಲ್ಲಿ ಯಾರದೋ ಮೂಲಕ ಮೇಯರ್ ಶಿವಕುಮಾರ್ ಅವರು ಪಾಲಿಕೆ ಕಾರ್ಯ ದರ್ಶಿಗಳಿಗೆ ಲೆಟರ್ ಕಳುಹಿಸಿ ಸದಸ್ಯರು ನಾನಾ ಕಾರಣಗಳಿಂದ ಇಂದಿನ ಸಭೆಗೆ ಬರಲಾಗುತ್ತಿಲ್ಲ.ಹಾಗಾಗಿ ಸಭೆಗೆ ಕೋರಂ ಇಲ್ಲ.ಆದ್ದರಿಂದ ಚುನಾವಣೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಮೇಯರ್ ಆಯ್ಕೆಯಾಗಿ ಆರು ತಿಂಗಳು ಕಳೆದಿದೆ.ಮೊದಲ ಸಭೆ ವೇಳೆಯೇ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಬೇಕಿತ್ತು.
ಆದರೆ ಆಡಳಿತ ಪಕ್ಷ ಹಾಗೂ ಮೇಯರ್ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ನಂತರ ಪಾಲಿಕೆ ಆಯುಕ್ತರ ಕಚೇರಿಗೆ ಬೀಗ ಜಡಿದು ಅಲ್ಲಿದ್ದ ಪಾಟ್ ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಮೇಯರ್ ಕಚೇರಿಗೂ ಬೀಗ ಹಾಕಲು ಮುಂದಾದಾಗ ಪೊಲೀಸರು ಧಾವಿಸಿ ಕಾಂಗ್ರೆಸ್ ಸದಸ್ಯರನ್ನು ತಡೆದರು.
ಇನ್ನಷ್ಟು ಕೆರಳಿದ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗುತ್ತಾ ಇನ್ನಷ್ಟು ಹೊತ್ತು ಪ್ರತಿಭಟನೆ ನಡೆಸಿದರು.

