ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಸಂಕಲ್ಪ ಯಾತ್ರೆ ಮಾಡಲಿ -ಹೆಚ್ ಡಿಕೆ

ಬೆಂಗಳೂರು: ಪಂಚರತ್ನ ರಥಯಾತ್ರೆ ಬಗ್ಗೆ ಲಘುವಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಬಿಜೆಪಿ ನಾಯಕರು ವಿಜಯ ಸಂಕಲ್ಪ ಯಾತ್ರೆ ಮಾಡುವ ಬದಲು ‘ಸಿಡಿ ಸಂಕಲ್ಪ ಯಾತ್ರೆ’ ಮಾಡಿದರೆ ಲೇಸು ಎಂದು ಕುಟುಕಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೇಂದ್ರ ಸಚಿವರು ತಾವು ಕೂತಿರುವ ಹುದ್ದೆಯ ಘನತೆಯನ್ನು ಮರೆತು ಮಾತನಾಡಿದ್ದಾರೆ. ಅವರಿಗೆ ಅವರದೇ ಭಾಷೆಯಲ್ಲಿ ಹೇಳುವುದಾದರೆ, ಅವರು ವಿಜಯ ಸಂಕಲ್ಪ ಯಾತ್ರೆ ಮಾಡುವ ಬದಲು ‘ಸಿಡಿ ಸಂಕಲ್ಪ ಯಾತ್ರೆ’ ನಡೆಸಲಿ. ಅವರ ಯಾತ್ರೆಗೆ ಸಿಡಿ ಸಂಕಲ್ಪ ಯಾತ್ರೆ ಎನ್ನುವುದು ಸರಿಯಾದ ಹೆಸರು ಎಂದು ಪ್ರಹ್ಲಾದ್ ಜೋಷಿ ಅವರಿಗೆ ಟಾಂಗ್ ನೀಡಿದರು.

ಬಿಜೆಪಿಯವರು ಸಿಡಿ ಸಂಕಲ್ಪ ಅಂತ ಹೆಸರಿಟ್ಟು ಹೋದರೆ ನಾನು ನವಗ್ರಹ ಅಂತ ಹೆಸರು ಬದಲಾಯಿಸುತ್ತವೆ. ಕೇಂದ್ರದ ಮಂತ್ರಿಯಾಗಿ ಅವರು ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಅದೇ ಧೂಳು ಮಿಶ್ರಿತ ರಸ್ತೆಗಳು, ಸ್ವಚ್ಚತೆ ಇಲ್ಲದ ಗ್ರಾಮಗಳನ್ನು ಅವರು ನೋಡಿದ್ದರೆಯೇ? ಅವರ ಸರಕಾರದ ಸ್ವಚ್ಚ ಭಾರತದ ಹಣೆಬರಹ ಏನಾಗಿದೆ ಎನ್ನುವುದನ್ನು ಅವರು ಉತ್ತರ ಕರ್ನಾಟಕದ ಹಳ್ಳಿಗಳಿಗೆ ಬಂದು ನೋಡಲಿ ಎಂದು ಕುಮಾರಸ್ವಾಮಿ ಅವರು ಚಾಟಿ ಬೀಸಿದರು.

ದೇವೆಗೌಡರ ಕುಟುಂಬ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಹಾಗೆಯೇ, ನಿಮ್ಮ ಕುಟುಂಬದ ಹಣೆಬರಹ ಏನು ಎನ್ನುವುದು ಜನತೆಗೆ ಗೊತ್ತಿದೆ. ಬ್ಯಾಂಕ್ ಗಳನ್ನು ನುಂಗಿ ನೀರು ಕುಡಿದಿರುವ ನಿಮ್ಮ ಸಹೋದರನ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ. ಅಂಥ ವಂಚನೆಯ ಕೆಲಸವನ್ನು ನಮ್ಮ ಕುಟುಂಬ ಮಾಡಿಲ್ಲ ಎಂದು ಕೇಂದ್ರ ಸಚಿವರ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಗುಡುಗಿದರು.

ನಾವು ಯಾವುದೇ ಗಲಭೆಗೆ ಅವಕಾಶ ಕೊಡದೇ ಸುಗಮವಾಗಿ ಅಭ್ಯರ್ಥಿ ಆಯ್ಕೆ ಮಾಡ್ತೀವಿ. ಈಗಾಗಲೇ 93 ಜನ ಅಭ್ಯರ್ಥಿಗಳ ಆಯ್ಕೆ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ಇಂಥವರಿಗೆ ನಾವು ಉತ್ತರ ಕೊಡೋದಿಲ್ಲ ಎಂದು ಅವರು ತಿಳಿಸಿದರು.

ಬಿಜೆಪಿ ನಾಯಕರಿಗೆ ಪಂಚರತ್ನ ಯಾತ್ರೆ ಬಗ್ಗೆ ತುಂಬಾ ಯೋಚನೆ ಆಗಿದೆ. ದುಡ್ಡು ಕೊಟ್ಟು ಕರೆದರು ಕೂಡ ಅವರ ಸಭೆಗಳಿಗೆ ಜನ ಬರ್ತಾ ಇಲ್ಲ. ನಮ್ಮ ರಥಯಾತ್ರೆಯ ನಡುರಾತ್ರಿ ಅಷ್ಟೇ ಅಲ್ಲ, ಬೆಳಗಿನ ಜಾವ ಆದರೂ ಜನ ಸೇರುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ನಮ್ಮ ಪಕ್ಷದ ಮಿಷನ್ 123 ಬಗ್ಗೆ ಲಘುವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು, 140 ಗುರಿ ಇಟ್ಟುಕೊಂಡು ಹೋಗಿದ್ದಾರೆ. ಆ 140ರಲ್ಲಿ 1 ತೆಗೆದುಬಿಡಿ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.

ಕುಟುಂಬ ರಾಜಕಾರಣ ಬಗ್ಗೆ ಮಾತಾಡೋಕೆ ನೈತಿಕತೆ ಬೇರೆ ಪಕ್ಷಗಳಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ಹೇಳಿದರು.

ಹಾಸನ ಟಿಕೆಟ್ ವಿಚಾರದ ಬಗ್ಗೆ ಇನ್ನೂ ಯಾವುದೇ ಚರ್ಚ ಆಗಿಲ್ಲ. ಮಾಧ್ಯಮದಲ್ಲಿ ನಾನು ಮಾತಾಡಿರೋದು ಅಷ್ಟೆ. ಎರಡು ಮೂರು ದಿನದಲ್ಲಿ ಚರ್ಚೆ ಮಾಡುತ್ತೇವೆ. ಈ ವಿಷಯದಲ್ಲಿ ದಯಮಾಡಿ ಪದೇಪದೆ ದೇವೇಗೌಡರ ಹೆಸರು ತರಬೇಡಿ ಎಂದು ಅವರು ಮನವಿ ಮಾಡಿದರು.

ಹಾಲಿ ಶಾಸಕರಾದ ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಸಭೆ ಕರೆದಾಗ ಅವರು ಬಂದಿಲ್ಲ. ಎರಡು ವರ್ಷದಿಂದ ಅವರು ಪಕ್ಷದಿಂದ ದೂರ ಇದ್ದಾರೆ. ಈಗಾಗಲೇ ಎ.ಮಂಜು ಅವರ ಜತೆ ಮಾತಾಡಿದ್ದೇನೆ. ರೇವಣ್ಣ ಅವರು ಕೂಡ ಎ.ಮಂಜು ಜತೆ ಮಾತಾಡಿದ್ದಾರೆ. ಎ.ಮಂಜು ಅವರಿಗೆ ಕ್ಲಿಯರ್ ಆಗಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.