ಮೈಸೂರು: ಸನ್ಮಾರ್ಗದ ಕಡೆ ಮಗು ಬೆಳೆಯುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯವಾಗಿದೆ ಎಂದು ತಲಕಾಡಿನ ಶ್ರೀ ಬಾಲಾಕೃಷ್ಣಾನಂದ ಸಂಸ್ಥಾನಂ ಶುಕಶಂಕರ ಪೀಠದ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಬ್ರಹ್ಮಿ ಭೂತ ಶ್ರೀ ವಾಸುದೇವ್ ಮಹಾರಾಜ್ ಫೌಂಡೇಶನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ಅಕ್ಷರಭ್ಯಾಸ ಕಾರ್ಯಕ್ರಮದ ದಿವ್ಯ ಸನಿಧ್ಯ ವಹಿಸಿ ಶ್ರೀಗಳು ಹಿತವಚನ ನೀಡಿದರು.
ಪುರಾಣ ಇತಿಹಾಸದಲ್ಲಿರುವ ಪಾರ್ವತಿದೇವಿ ತನ್ನ ಮಗು ಗಣೇಶನಿಗೂ ಸಹ ಅಕ್ಷರಾಭ್ಯಾಸ ಕಲಿಸಿದ ಉಲ್ಲೇಖವಿದೆ ಎಂದು ಹೇಳಿದರು.
ಶಿಕ್ಷಣಕ್ಕೆ ಎಂದೂ ಅಂತ್ಯವಿಲ್ಲ, ತಂತ್ರಜ್ಞಾನ ಮುಂದಿನ ಪೀಳಿಗೆ ಕಾಲಮಾನಕ್ಕೆ ತಕ್ಕಂತೆ ಪ್ರತಿದಿನ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಯುತ್ತಾ ಇರಬೇಕು, ಪ್ರತಿಯೊಬ್ಬರು ಶಿಕ್ಷಣ ಪಡೆದು ನಂತರ ಅದನ್ನ ಮತ್ತೊಬ್ಬರಿಗೆ ವಿದ್ಯಾದಾನ ಮಾಡಲು ಮುಂದಾಗಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.
ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮಕ್ಕಳು ಅಕ್ಷರಭ್ಯಾಸದಲ್ಲಿ ಪಾಲ್ಗೊಂಡಿದ್ದರು.
ಮೊದಲು ಸರಸ್ವತಿ ಪೂಜೆ ಮಾಡಿ ಆನಂತರ ತಂದೆ,ತಾಯಿ ತಮ್ಮ ಮಕ್ಕಳ ಕೈಹಿಡಿದು ಅಕ್ಕಿ ಕಾಲಿನಲ್ಲಿ ಓಂಕಾರ ಮತ್ತು ಗಣೇಶನಾಮ ಹಾಗೂ ತಮ್ಮ ಮಾತೃಭಾಷೆ ಅ ಆ ಇ ಈ ಮುಂತಾದವುಗಳನ್ನು ಬರೆಸುವುದರ ಮೂಲಕ ಅಕ್ಷರಭ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕರಾದ ಎಸ್.ಎ ರಾಮದಾಸ್ ಮಾತನಾಡಿ ಶಿಕ್ಷಣ ಎನ್ನುವುದು ಪ್ರತಿಯೊಂದು ಮಗುವಿಗೆ ಸಿಗಬೇಕಾದ ಮೂಲಭೂತ ಹಕ್ಕು ಎಂದು ಹೇಳಿದರು.
ಸಾಮೂಹಿಕ ವಿವಾಹವನ್ನ ಸರಳ ರೀತಿಯಲ್ಲಿ ಸರ್ಕಾರದ ವತಿಯಿಂದ ತಂದಿರುವ ಸಪ್ತಪದಿ ಯೋಜನೆಯಂತೆ ಅಕ್ಷರಭ್ಯಾಸ ಕಾರ್ಯಕ್ರಮವನ್ನ ಶಿಕ್ಷಣ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಹಮ್ಮಿಕೊಳ್ಳುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.ಮೂಡ ಮಾಜಿ ಅಧ್ಯಕ್ಷ ಎಚ್. ವಿ. ರಾಜೀವ್, ಪೂಜ್ಯ ಎಲೈವಾರ್ ಸ್ವಾಮೀಜಿ , ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಹಿರಿಯ ಸಮಾಜಸೇವಕರಾದ ಕೆ. ರಘುರಾಮ ವಾಜಪಾಯಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಹೇಮಾನಂದೀಶ್, ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಹಿರಿಯ ಪತ್ರಕರ್ತ ಅನಿಲ್ ಕುಮಾರ್, ಮಹರ್ಷಿ ವಿದ್ಯಾ ಸಂಸ್ಥೆಯ ಮುಖ್ಯಸ್ಥ ತೇಜಸ್ ಶಂಕರ್, ನಗರಪಾಲಿಕೆ ನಾಮನಿರ್ದೇಶಿತ ಸದಸ್ಯ ಜಗದೀಶ್, ಕೆ ಎಂ ಪಿ ಕೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಪುರೋಹಿತರಾದ ಸುರೇಶ್ ಹೆಗ್ಡೆ, ಕಡಕೊಳ ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ನವೀನ್ ಕೆಂಪಿ, ಚಕ್ರಪಾಣಿ, ಸುಚೀಂದ್ರ ಮತ್ತು ಶಾಲೆಯ ಶಿಕ್ಷಕ ವೃಂದ ಈ ವೇಳೆ ಹಾಜರಿದ್ದರು.

