ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುವತ್ತ ಗಮನ ಹರಿಸಿ -ಡಿಕೆಶಿ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲಲೇಬೇಕಿದೆ ಹಾಗಾಗಿ ಎಲ್ಲ ಶಾಸಕರು ಈಗಿನಿಂದಲೇ ಅಲರ್ಟ್ ಆಗಿರಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬುಧವಾರ ನಡೆದ ಕಾಂಗ್ರೆಸ್ ‌ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ.ಶಿ ಮಾತನಾಡಿ, ವಿಧಾನಸಭೆ ಚುನಾವಣೆ ಗೆದ್ದೆವು ಎಂದು ಸುಮ್ಮನೆ ಕೂರುವಂತಿಲ್ಲ,ಲೋಕಸಭೆ ಚುನಾವಣೆಯಲ್ಲೂ‌ ಗೆಲುವು ಮುಂದುವರೆಯಬೇಕು ಎಂದು ಹೇಳಿದರು.

ಬಿಬಿಎಂಪಿ ಚುನಾವಣೆಯಲ್ಲೂ ವಿಜಯ ಸಾಧಿಸಬೇಕಿದೆ, ಜಿಲ್ಲಾ ಸಚಿವರಾಗುವವರು ಪ್ರತಿ ಜಿಲ್ಲೆಯಲ್ಲಿ ಹಾಗೂ ಶಾಸಕರು ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಪಕ್ಷದ ಕಚೇರಿ ಸ್ಥಾಪಿಸಲೇಬೇಕು ಎಂದು ಸೂಚಿಸಿದರು.

ನಮಗೆ ಪಕ್ಷದ ಕಚೇರಿಯೇ ದೇಗುಲ, ಅದಕ್ಕೆ ಮೊದಲ ಆದ್ಯತೆ ನೀಡಬೇಕು, ಎಲ್ಲರಿಗೂ ಅಧಿಕಾರ ಸಿಗದಿರಬಹುದು. ಆದರೆ ನಿಮ್ಮ ಶ್ರಮಕ್ಕೆ ಗೌರವ ಸಿಗುತ್ತದೆ ಎಂದು ತಿಳಿಸಿದರು

ಪಕ್ಷದ ಕೆಲಸವನ್ನು ದೇವರ ಕೆಲಸ ಎಂದು ಮಾಡಬೇಕು,ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರನ್ನು ಖಂಡಿತಾ ಮರೆಯಬಾರದು ಎಂದು ಸಲಹೆ ನೀಡಿದರು.

ರಾಜ್ಯದ ಜನರಿಗೆ  ಸ್ವಚ್ಛ ಆಡಳಿತ ನೀಡಲು ಸಹಕರಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದ ಡಿ.ಕೆ.ಶಿವಕುಮಾರ್,

ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.