ಬೆಂಗಳೂರು: ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದ್ದು, ತನ್ನ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆದಿವಾಸಿ ಮಹಿಳೆ ಎಂಬ ಕಾರಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಕುಟುಕಿದರು.
ಅದೇ ಆದಿವಾಸಿ ಮಹಿಳೆ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಗಿದ್ದಾಗ ಕಾಂಗ್ರೆಸ್ ಯಶವಂತ ಸಿನ್ಹಾ ಅವರನ್ನು ಅಭ್ಯರ್ಥಿ ಮಾಡಿದ್ದು ಯಾಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಸಂಸತ್ ಭವನ ಉದ್ಘಾಟನೆಗೆ 21 ಪಕ್ಷಗಳು ಬಹಿಷ್ಕಾರ ಹಾಕಿವೆ. ಅದು ಆಯಾ ಪಕ್ಷದ ನಿಲವು.
ಸಂಸತ್ ಭವನ ಯಾವುದೋ ಪಕ್ಷದ ಸಂಘಟನೆಗೆ ಸೀಮಿತವಾದದ್ದಲ್ಲ. ದೇಶದ ಜನರ ತೆರಿಗೆ ಹಣದಿಂದ ಕಟ್ಟಿರುವ ಭವನ ಅದು ಎಂದು ಹೇಳಿದರು.
ರಾಷ್ಟ್ರಪತಿ ಗಳಿಂದ ಉದ್ಘಾಟನೆ ಆಗಬೇಕಿತ್ತು ಎಂಬ ವಿಚಾರ ಇಟ್ಟು ಕಾಂಗ್ರೆಸ್ ಬಹಿಷ್ಕಾರ ಮಾಡಲು ಮುಂದಾಗಿದೆ. ಇದೇ ಕಾಂಗ್ರೆಸ್ ಛತ್ತೀಸಗಢದಲ್ಲಿ ವಿಧಾನಸಭಾ ಕಟ್ಟಡದ ಉದ್ಘಾಟನೆ ಮಾಡಲು ಸೋನಿಯಾ ಗಾಂಧಿ ಅವರಿಂದ ಅಡಿಗಲ್ಲು ಹಾಕಿಸಿತ್ತು. ಅಲ್ಲಿ ರಾಷ್ಟ್ರಪತಿ ಅವರು ನೆನಪಿಗೆ ಬರಲಿಲ್ಲವೇ ಎಂದು ಎಚ್ ಡಿ ಕೆ ಪ್ರಶ್ನಿಸಿದರು.
ಕರ್ನಾಟಕದಲ್ಲಿ ವಿಕಾಸಸೌಧ ಉದ್ಘಾಟನೆ ಮಾಡಲು ರಾಷ್ಟ್ರಪತಿಗಳನ್ನು ಕಾಂಗ್ರೆಸ್ ನಾಯಕರು ಕರೆಸಿದ್ದರಾ. ಅಂದು ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರೇ ವಿಕಾಸಸೌಧವನ್ನು ಉದ್ಘಾಟನೆ ಮಾಡಲಿಲ್ಲವೇ ಈಗ ನೋಡಿದರೆ ಆದಿವಾಸಿ ಮಹಿಳೆಯನ್ನು ಕಡೆಗಣಿಸಿದ್ದಾರೆ ಅಂತಾ ನಾಟಕ ಮಾಡುತ್ತಿದ್ದಾರೆ
ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ ಕಳಿಸಿದ್ದಾರೆ. ಹಾಗಾಗಿ ಅವರು ಈ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ. ಇದರಿಂದ ಬಿಜೆಪಿ ಬಗ್ಗೆ ಜೆಡಿಎಸ್ ಮೃದುಧೋರಣೆ ಅಂತಾ ತಿಳಿಯುವ ಅಗತ್ಯ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಕುಮಾರಸ್ವಾಮಿ ಉತ್ತರಿಸಿದರು.

