ಆಡಳಿತಕ್ಕೆ ಹೊಸ ‌ರೂಪ:ಸಿದ್ದರಾಮಯ್ಯ

ಬೆಂಗಳೂರು: ‌ಸಚಿವ ಸಂಪುಟದ ಎಲ್ಲ 34 ಸ್ಥಾನಗಳನ್ನು ಭರ್ತಿ ಮಾಡಲಾಗಿದ್ದು, ಆಡಳಿತಕ್ಕೆ ಹೊಸ ರೂಪ ಕೊಡುವ ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಾವರು ತಿಳಿಸಿದರು.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದ ಅನೌಪಚಾರಿಕ ಸಭೆಯ ನಂತರ ಮಾಧ್ಯಮದವರೊಂದಿಗೆ ಸಿದ್ದು ಮಾತನಾಡಿದರು.

ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚಿಸಲಾಗಿದೆ. ಮುಖ್ಯಮಂತ್ರಿ ಹೊರತುಪಡಿಸಿ 33 ಸ್ಥಾನಗಳನ್ನೂ ಭರ್ತಿ ಮಾಡಲಾಗಿದೆ. ಖಾತೆ ಹಂಚಿಕೆ ಸಧ್ಯದಲ್ಲೇ ಮಾಡಲಾಗುವುದು ಎಂದು ಹೇಳಿದರು.

ಸಚಿವ ಸಂಪುಟವು ಹೊಸ ಹಾಗೂ ಹಳೆ ಮುಖಗಳ ಸಮ್ಮಿಶ್ರಣವಾಗಿದೆ. ಮೊದಲ ಬಾರಿ ಗೆದ್ದವರನ್ನು ಮಂತ್ರಿ ಮಾಡಿಲ್ಲ.
ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕಿದೆ

ಜನ ಹೊಸ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಆಡಳಿತಕ್ಕೆ ಹೊಸ ರೂಪ ಕೊಡುವ ದೃಷ್ಟಿಯಿಂದ ಈ ಸಚಿವರ ಸಂಪುಟ ರಚಿಸಲಾಗಿದೆ ಎಂದು ತಿಳಿಸಿದರು.

ವಿರೋಧ ಪಕ್ಷಗಳು ತಾವು ಕೊಟ್ಟ ವಚನ ಈಡೇರಿಸಿಲ್ಲ. ನಾವು ಹಿಂದೆಯೂ ನಮ್ಮ ವಚನ ಈಡೇರಿಸಿದ್ದೇವೆ. ಈಗಲೂ ಈಡೇರಿಸುತ್ತೇವೆ.

ಐದು ಗ್ಯಾರಂಟಿಗಳ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ವಿವರಗಳನ್ನು ಮಂಡಿಸಲು ಸೂಚಿಸಲಾಗಿದೆ. ಈ ಕುರಿತು ಚರ್ಚಿಸಿ ಅನುಮೋದನೆ ನೀಡಿ ಶೀಘ್ರವೇ ಅವುಗಳನ್ನು ಜಾರಿಗೆ ತರಲಾಗುವುದು ಎಂದು ‌ಭರವಸೆ ನೀಡಿದರು.

ಕೊಡಗು, ಹಾವೇರಿ, ಹಾಸನ , ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಿಗೆ ಪ್ರಾತಿನಿಧ್ಯ ಲಭಿಸಿಲ್ಲ. ಕೆಲವು ಮಾನದಂಡಗಳನ್ನು ಅನುಸರಿಸುವಾಗ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ.

ಉದಾಹರಣೆಗೆ ಕೊಡಗು ಜಿಲ್ಲೆಯಲ್ಲಿ ಇಬ್ಬರೂ ಮೊದಲ ಬಾರಿ ಶಾಸಕರಾಗಿದ್ದಾರೆ. ಹಾಗಾಗಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಲು ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.