ಬೆಂಗಳೂರು: ಯಾವುದೇ ನೆಪಗಳನ್ನು ಹೇಳದೆ ಗ್ಯಾರಂಟಿಗಳನ್ನು ಕೂಡಲೇ ಜಾರಿ ಮಾಡಬೇಕೆಂದು ಕಾಂಗ್ರೆಸ್ ಸರ್ಕಾರವನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೀರಿ, ಗೆದ್ದು ಅಧಿಕಾರಾನೂ ಹಿಡಿದಿದ್ದೀರಿ ಹಾಗಾಗಿ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದು ನಿಮ್ಮ ಜವಾಬ್ದಾರಿ ಎಂದು ಟ್ವೀಟ್ ಮಾಡಿ ಅವರು ಚಾಟಿ ಬೀಸಿದ್ದಾರೆ.
ಕಾಂಗ್ರೆಸ್ ಗೆ 135 ಸೀಟು ಕೊಟ್ಟ ಜನತೆಯ ಗ್ಯಾರಂಟಿ ಬೇಡಿಕೆ ಈಡೇರಿಸುವುದು ನ್ಯಾಯಯುತವಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗುವುದಕ್ಕೆ ಮುನ್ನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರೇ ಸಹಿ ಮಾಡಿಕೊಟ್ಟ ಕಾರ್ಡುಗಳು ಜನರ ಬಳಿ ಇವೆ. ಆ ಗ್ಯಾರಂಟಿಗಳಿಗೆ ಗ್ಯಾರಂಟಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ದಿನನಿತ್ಯವೂ ಗ್ಯಾರಂಟಿಗಳ ಬಗ್ಗೆ ಜನರಲ್ಲಿ ನಿರೀಕ್ಷೆ ಮೇರೆ ಮೀರುತ್ತಿದೆ, ಆಕ್ರೋಶ ಹೆಚ್ಚುತ್ತಿದೆ.
ಜನಾಕ್ರೋಶಕ್ಕೆ ಸಬೂಬು ಸರಿಯಲ್ಲ. ಏಕೆಂದರೆ, ನಿರೀಕ್ಷೆ ಮೂಡಿಸಿದ್ದು ನೀವೇ,ಆದ್ದರಿಂದ ಷರತ್ತು ನೆಪದಲ್ಲಿ ಜನರನ್ನು ಸತಾಯಿಸುವುದು ನ್ಯಾಯವಲ್ಲ ಎಂದು ಹೇಳಿದ್ದಾರೆ.
ನನಗೂ ಫ್ರೀ, ನಿನಗೂ ಫ್ರೀ, ಸರ್ವರಿಗೂ ಫ್ರೀ ಎಂದ ಮುಖ್ಯಮಂತ್ರಿಗಳು ಈಗ ಗ್ಯಾರಂಟಿಗಳ ಬಗ್ಗೆ ದಿವ್ಯ ಮೌನ ವಹಿಸಿರುವುದು ಏಕೆ ಎಂದು ಎಚ್ ಡಿ ಕೆ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳೇ ಜನರಿಗೆ ನೇರವಾಗಿ ಹೇಳಲಿ, ಜನರಲ್ಲಿ ವಿಶ್ವಾಸ ಮೂಡಿಸಲಿ. ಮಾಧ್ಯಮಗಳಲ್ಲಿ ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಜಾಹೀರಾತುಗಳೂ ಇನ್ನೂ ಜನಮಾನಸದಿಂದ ಮಾಸಿಲ್ಲ.
ಅದೇ ರೀತಿ ಸ್ವತಃ ಮುಖ್ಯಮಂತ್ರಿಗಳೇ ಜೂನ್ 1ಕ್ಕೆ ಗ್ಯಾರಂಟಿ ಜಾರಿ ಮಾಡುವ ಬಗ್ಗೆ ಜಾಹೀರಾತು ನೀಡಿ ಜನರಿಗೆ ಖಾತರಿ ಕೊಡಲಿ ಎಂದು ಸಲಹೆನೀಡಿದ್ದಾರೆ ಕುಮಾರಸ್ವಾಮಿ.
ಗ್ಯಾರಂಟಿಗಳ ಬಗ್ಗೆ ಜನಕ್ಕೆ ಬೆಟ್ಟದಷ್ಟು ನಿರೀಕ್ಷೆ ಇದೆ. ಜಾರಿ ಮಾಡಿ, ಅದರ ಹೊರತಾಗಿ ಈ ಭರವಸೆಗಳೇ ಅಗಮ್ಯಗೋಚರವಾಗಿ ಗಮ್ಯವೇ ಇಲ್ಲದ ಆಡಳಿತ ಕೊಡುವುದು ಬೇಡ. ಇಷ್ಟೇ ನನ್ನ ಕಾಳಜಿ ಎಂದಿದ್ದಾರೆ ಅಲ್ಲದೆ ಗ್ಯಾರಂಟಿ ಜಾರಿ ಸರಕಾರದ ಜವಾಬ್ದಾರಿ ಎಂದು ಹ್ಯಾಷ್ ಟ್ಯಾಗ್ ಕೂಡಾ ಮಾಡಿದ್ದಾರೆ.

