ಬ್ರಿಜ್‌ ಭೂಷಣ್‌ ವಿರುದ್ಧ 10 ಕಂಪ್ಲೆಂಟ್‌, 2 ಎಫ್ ಐ ಆರ್

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಗಳ ಆಧಾರದ ಮೇಲೆ ದೆಹಲಿ ಪೊಲೀಸರು 2 ಎಫ್‌ಐಆರ್‌ ಮತ್ತು 10 ದೂರುಗಳನ್ನ ದಾಖಲಿಸಿದ್ದಾರೆ.

ಕುಸ್ತಿಪಟುಗಳ ದೂರುಗಳ ಅನ್ವಯ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಎರಡು ಎಫ್‌ಐಆರ್‌ ಪ್ರಕಾರ ಬ್ರಿಜ್‌ ಭೂಷಣ್‌ ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆಯಿಟ್ಟಿದ್ದರು, ಅನುಚಿತವಾಗಿ‌ ದೇಹ ಸ್ಪರ್ಶಿಸುವುದು, ಅವರನ್ನು ಹಿಂಬಾಲಿಸುವುದು ಸೇರಿದಂತೆ 10 ದೂರುಗಳನ್ನು ದಾಖಲಿಸಲಾಗಿದೆ.

ಕಳೆದ ಏಪ್ರಿಲ್‌ 21 ರಂದೇ ದೂರು ದಾಖಲಾಗಿದ್ದು, ಏಪ್ರಿಲ್‌ 28 ರಂದು ಎರಡು FIR ದಾಖಲಾಗಿದ್ದು,ಕನಿಷ್ಠ 3 ವರ್ಷ ಜೈಲು ಶಿಕ್ಷೆಗೆ ಒಳಪಡಿಸಬಹುದಾಗಿದೆ. ಭೂಷಣ್‌ ಉಸಿರಾಟದ ಪರಿಶೀಲನೆ ನೆಪದಲ್ಲಿ ದೇಹವನ್ನು ಮುಟ್ಟುತ್ತಿದ್ದ ಎಂದು ಕುಸ್ತಿಪಟು ಗಳು ದೂರು ನೀಡಿದ್ದಾರೆ.

ಮೊದಲ ಎಫ್‌ಐಆರ್‌ನಲ್ಲಿ 6 ಒಲಿಂಪಿಯನ್‌ಗಳ ಆರೋಪ ಉಲ್ಲೇಖಿಸಿದರೆ, 2ನೇ ಎಫ್‌ಐಆರ್‌ನಲ್ಲಿ ಅಪ್ರಾಪ್ತೆಯರ ಪೋಷಕರ ದೂರುಗಳನ್ನ ದಾಖಲಿಸಲಾಗಿದೆ.

ಭೂಷಣ್‌ ತಮ್ಮನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಿದ್ದ, ಭುಜವನ್ನು ಬೇಕಂತಲೇ ಒತ್ತಿ ಹಿಡಿಯುತ್ತಿದ್ದ, ಅನುಚಿತವಾಗಿ ದೇಹವನ್ನ ಸ್ಪರ್ಶಿಸುತ್ತಿದ್ದ ಎಂದು ಪೋಷಕರು ದೂರು ದಾಖಲಿಸಿದ್ದಾರೆ.

ನೂತನ ಸಂಸತ್‌ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳ ವಿರುದ್ಧವೂ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.