ಅಧಿಕಾರಿಗಳ ಅಮಾನತಿಗೆ ಡಿಸಿಎಂ ಆದೇಶ

ಬೆಂಗಳೂರು: ಪ್ರಭಾವಿ ಅಪಾರ್ಟ್ಮೆಂಟ್  ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತಂದ ಎಲ್ಲ ಅಧಿಕಾರಿಗಳು, ಇಂಜಿನಿಯರ್ ಗಳನ್ನು ಇವತ್ತು ಸಂಜೆ ಒಳಗೆ ಸೇವೆಯಿಂದ ಅಮಾನತು ಮಾಡುವಂತೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದರು.

ಈ ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಐಡಿಯಾ ಕೊಟ್ಟವರು ಯಾರು? ಯೋಜನೆ ರೂಪಿಸಿದವರು ಯಾರು? ಅನುಷ್ಠಾನಕ್ಕೆ ತಂದವರು ಯಾರು? ಯಾಕಾಗಿ ಇದನ್ನು ಮಾಡಿದಿರಿ? ಯಾರಿಗೆ ಅನುಕೂಲ ಮಾಡಿಕೊಡಲು ಮಾಡಿದಿರಿ? ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದೀರಿ ಎಂದು ಶಿವಕುಮಾರ್ ಅವರು ಸಭೆಯಲ್ಲಿ ಪ್ರಶ್ನಿಸಿದರು.

ಅಧಿಕಾರಿಗಳು ಇದಕ್ಕೆ ಉತ್ತರಿಸಲು ತಡಬಡಾಯಿಸಿದರು. ತಕ್ಷಣವೇ ಉಪಮುಖ್ಯಮಂತ್ರಿಗಳು ಹೊಸಕೆರೆಹಳ್ಳಿ ಕೆರೆ ಭಾಗ ಮಾಡಿ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು.