ಭಾನುವಾರ ಮಹಿಳೆಯರಿಗೆ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಚಾಲನೆ -ಸಿದ್ದು

ಮೈಸೂರು: ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಏಕಕಾಲಕ್ಕೆ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಮೊದಲನೆಯದಾಗಿ ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಶಕ್ತಿ‌ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಿಎಂ ಆದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಸಿದ‍್ಧರಾಮಯ್ಯ ಭೇಟಿ ನೀಡುತ್ತಿದ್ದು ಸುತ್ತೂರು ಹೆಲಿಪ್ಯಾಡ್ ನಲ್ಲಿ ಅವರಿಗೆ ಭರ್ಜರಿ ಸ್ವಾಗತ ಕೋರಲಾಯಿತು.

ಹೆಲಿಪ್ಯಾಡ್ ನಲ್ಲಿ  ಮುಖ್ಯಮಂತ್ರಿಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಭಾನುವಾರ ವಿಧಾನಸೌಧದ ಮುಂದೆ ಮಧ್ಯಾಹ್ನ 1‌ ಗಂಟೆಗೆ ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮಹಿಳೆಯರ ಉಚಿತ ಪ್ರಯಾಣದ ಯೋಜನೆಗೆ ಹಸಿರು ನಿಶಾನೆ ತೋರಿಸುತ್ತೇವೆ ಎಂದು ಹೇಳಿದರು.

ಎಸಿ ಬಸ್ ಗಳು, ಲಕ್ಷುರಿ ಬಸ್ ಗಳು, ಹವಾನಿಯಂತ್ರಿತ ಬಸ್ ಗಳನ್ನು ಹೊರತುಪಡಿಸಿ ಎಕ್ಸ್ ಪ್ರೆಸ್  ಬಸ್ ಗಳಲ್ಲೂ ಮಹಿಳೆಯರು ಉಚಿತವಾಗಿ ರಾಜ್ಯದೊಳಗೆ ಮಾತ್ರ ಪ್ರಯಾಣಿಸಬಹುದು ಎಂದು ಸಿಎಂ ಸ್ಪಷ್ಟಪಡಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಗಳಲ್ಲಿ ಮಾತ್ರ ಪ್ರಯಾಣುಸಬಹುದು ಆದರೆ ನಮ್ಮ ರಾಜ್ಯ ಬಿಟ್ಟು ತಿರುಪತಿ ಮತ್ತಿತರ ಕಡೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಗೆ, ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುತ್ತೇವೆ ಎಂದು ಇದೇ‌ ವೇಳೆ ಸಿದ್ಧರಾಮಯ್ಯ ತಿಳಿಸಿದರು.

ಎಲ್ಲರೂ ಉಚಿತ ಯೋಜನೆ ಪಡೆಯಬೇಕೆಂದು ಕಡ್ಡಾಯವಲ್ಲ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕೆಲಸ ಮಾಡಲಿಲ್ಲ ಎಂದರು.

ವರುಣಾವನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂಬ ಆಗ್ರಹ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ಧರಾಮಯ್ಯ,  ವರುಣಾ ಜನ ಕೇಳಿದರೆ ಮಾಡುತ್ತೇವೆ ಎಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ಹೇಳಿದರೆ ಮಾಢುವುದಿಲ್ಲ. ಪಿಎಸ್ ಐ ನೇಮಕಾತಿ ಹಗರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ಸಿದ್ದು ಹೇಳಿದರು.

ನಂಜನಗೂಡು ತಾಲ್ಲೂಕು ಬಿಳಿಗೆರೆ ಗ್ರಾಮದಲ್ಲಿ ನಡೆಯುವ  ಕೃತಜ್ಞತಾ ಸಮಾವೇಶದಲ್ಲಿ  ಸಿದ್ಧರಾಮಯ್ಯ ಭಾಗಿಯಾಗಲಿದ್ದಾರೆ.