ಬೆಂಗಳೂರು: ನಮಗೆ ಎಷ್ಟೇ ಕಷ್ಟ ಬರಲಿ ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದೂ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಶಪಥ ಮಾಡಿದರು.
ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ ಭಾನುವಾರ ವಿಧಾನಸೌಧದ ಮುಂಭಾಗ ಚಾಲನೆ ನೀಡಿದ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಸಿಎಂ ಮಾತನಾಡಿದರು.
ಬಿಜೆಪಿ 600 ಭರವಸೆ ಕೊಟ್ಟಿತ್ತು, 60 ಭರವಸೆ ಕೂಡ ಈಡೇರಿಸಲಿಲ್ಲ, ಅದರ ಬಗ್ಗೆ ಚರ್ಚೆ ಮಾಡಿಲ್ಲ, ನಮ್ಮ ಗ್ಯಾರಂಟಿ ಬಗ್ಗೆ ಚರ್ಚೆ ಮಾಡುತ್ತಾರೆ, ಅದಕ್ಕೆ ಕೆಲವು ಮಾಧ್ಯಮಗಳು ಕೈ ಜೋಡಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮಗೆ ಯಾವುದೇ ಜಾತಿ, ಧರ್ಮದ ಎಲ್ಲೆ ಇಲ್ಲ. ಎಲ್ಲಾ ಜಾತಿ-ಧರ್ಮದ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬೋ ಕೆಲಸ ಮಾಡುತ್ತೇವೆ. ಗೇಲಿ ಮಾತುಗಳಿಂದ ವಿಚಲಿತರಾಗಿಲ್ಲ. ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.
2013-2018 ರಲ್ಲಿ 168 ಭರವಸೆಯಲ್ಲಿ 158 ಭರವಸೆ ಈಡೇರಿಸಿ ಕೊಟ್ಟ ಮಾತು ಈಡೇರಿಸಿದ್ದೇವೆ. ಕೊಟ್ಟ ಮಾತಂತೆ ನಡೆದುಕೊಳಲ್ಲ ಅಂದ್ರು. ಕೆಲವರು ದಿವಾಳಿ ಆಗುತ್ತೆ ಅಂದರು. ನಾನು ಸಿಎಂ ಆಗಿ ಹೇಳುತ್ತಿದ್ದೇನೆ. ಕೊಟ್ಟ ಮಾತು ಈಡೇರಿಸುತ್ತೇವೆ ಎಂದು ನಿಶ್ಚಿತವಾಗಿ ನುಡಿದರು
ಗೃಹಜ್ಯೋತಿ ಜುಲೈ 1 ರಿಂದ ಜಾರಿ ಆಗುತ್ತದೆ. ಗೃಹಲಕ್ಷ್ಮಿ ಯೋಜನೆ ಆಗಸ್ಟ್ 16 ಕ್ಕೆ ಜಾರಿ ಆಗಲಿದೆ ಸದ್ಯ 40 ಸಾವಿರ ಕೋಟಿ ಹಣ ಬೇಕು. ಎಷ್ಟು ಹಣ ಖರ್ಚು ಮಾಡ್ತೀವಿ ಅನ್ನೋದು ಮುಖ್ಯ ಅಲ್ಲ. ಯಾರಿಗೆ ಯೋಜನೆ ಕೊಡುತ್ತೇವೆ ಎಂಬುದು ಮುಖ್ಯ ಎಂದು ನುಡಿದರು.
7 ಕೆ.ಜಿ ಅಕ್ಕಿ ಕೊಡ್ತಿದ್ದೆವು, 5 ಕೆಜಿಗೆ ಇಳಿಸಿದರು. ಯಾಕೆ ಅಂದ್ರೆ ಹಣ ಇಲ್ಲ ಅಂದ್ರು.ನಾವು 10 ಕೆ.ಜಿ ಆಹಾರ ಧಾನ್ಯ ಕೊಡ್ತೀವಿ. ಇದಕ್ಕೆ 10 ಸಾವಿರ ಕೋಟಿ ಬೇಕು.
ಬಡವರು ಎರಡು ಹೊತ್ತು ಊಟ ಮಾಡಬೇಕು. ಯಾರೂ ಹಸಿವಿನಿಂದ ಬಳಲಬಾರದು. ಹಸಿವಿನ ನೋವು ಗೊತ್ತಿರೋರಿಗೆ ಗೊತ್ತು. ಹೊಟ್ಟೆ ತುಂಬಿಸಿಕೊಂಡು ಅಜೀರ್ಣ ಮಾಡಿಕೊಳ್ಳೋರಿಗೆ ಅ ಬೆಲೆ ಗೊತ್ತಾಗಲ್ಲ ಎಂದು ತಿರುಗೇಟು ನೀಡಿದರು
ಇವತ್ತಿಂದ ಉಚಿತವಾಗಿ ಬಸ್ ನಲ್ಲಿ ಓಡಾಡಬಹುದು. ಸ್ಮಾರ್ಟ್ ಕಾರ್ಡ್ ಕೂಡಾ ಫ್ರೀಯಾಗಿ ಕೊಡಲಾಗುವುದು. ವಿದ್ಯಾರ್ಥಿನಿಯರಿಗೂ ಫ್ರೀ ಕೊಡುತ್ತೇವೆ ಇದು ಎಲ್ಲರಿಗೂ ಅನುಕೂಲವಾಗಲಿದೆ ಎಂದು ಸಿದ್ದು ತಿಳಿಸಿದರು.
ಅದಕ್ಕೆ ಕೊಂಕು ಮಾತಾಡ್ತಾರೆ. ಈ ಯೋಜನೆಗಳಿಗೆ ಮಧ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳಿಗೆ ಹೋಗುತ್ತದೆ. ರೈತರ ಸಾಲಮನ್ನಾ ಮಾಡದೇ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿದವರು ನಮ್ಮ ವಿರುದ್ಧ ಮಾತಾಡ್ತಾರೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದರು.
ನುಡಿದಂತೆ ನಡೆಯುವುದು ನಮ್ಮ ಸಂಸ್ಕಾರ-ಜನಪರ ಯೋಜನೆಗಳನ್ನು ಗೇಲಿ ಮಾಡುವುದು ಬಿಜೆಪಿ ಸಂಸ್ಕಾರ ಎಂದು ಟೀಕಿಸಿದರು.
ಹತ್ತು ಬಡವರ, ಮಧ್ಯಮ ವರ್ಗದವರ ಜೇಬಿಗೆ ಹಣ ಹಾಕಿದರೆ ಆರ್ಥಿಕತೆ ವೇಗ ಪಡೆದುಕೊಳ್ಳುತ್ತದೆ. ಶ್ರೀಮಂತರ ಜೇಬಿಗೆ ಹಣ ಹಾಕಿದರೆ ಆರ್ಥಿಕತೆಗೆ ಅಷ್ಟು ಲಾಭ ಆಗುವುದಿಲ್ಲ.
ಆದ್ದರಿಂದ ನಾವು ಬಡವರು, ಮಧ್ಯಮ ವರ್ಗದವರ ಜೇಬಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಹಣ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬರೀ ಶ್ರೀಮಂತರ ಹಿತ ಕಾಯುವ ಬಿಜೆಪಿ ಯವರಿಗೆ ನಮ್ಮ ಕಾಳಜಿ ಸಹಿಸಲು ಆಗುತ್ತಿಲ್ಲ. ನಮ್ಮ ಗುರಿ ಜನರ ಸಂಕಷ್ಟ ತಗ್ಗಿಸುವುದು. ಪ್ರಮಾಣವಚನ ಸ್ವೀಕರಿಸಿ ಕೇವಲ 20 ದಿನಗಳಲ್ಲಿ ಮೊದಲ ಗ್ಯಾರಂಟಿ ಜಾರಿಯಾಗಿ ನಾಡಿನ ಸಮಸ್ತ ಮಹಿಳೆಯರು ಇದರ ಅನುಕೂಲ ಪಡೆಯಲು ಶುರು ಮಾಡಿದ್ದಾರೆ. ಇಡಿ ರಾಜ್ಯದಲ್ಲಿ ಏಕ ಕಾಲಕ್ಕೆ ಶಕ್ತಿ ಯೋಜನೆ ಜಾರಿ ಆಗಿದೆ ಎಂದರು
ಮಹಿಳೆಯರನ್ನು ಸಶಕ್ತಗೊಳಿಸುವ ಉದ್ದೇಶದಿಂದ ಈ ಯೋಜನೆಗೆ “ಶಕ್ತಿ” ಎಂದು ಹೆಸರಿಡಲಾಗಿದೆ. ದೇಶದ ಅರ್ಧದಷ್ಟಿರುವ ಮಹಿಳೆಯರು ಅಭಿವೃದ್ಧಿಯಲ್ಲಿ ಪಾಲುದಾರರಾಗದೆ ದೇಶದ ಪ್ರಗತಿ ಸಾಧ್ಯವಿಲ್ಲ. ಭಾರತದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಕಡಿಮೆ ಆಗಿದೆ. ಈ ಪ್ರಮಾಣ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
ಬಡವರು, ಮಧ್ಯಮ ವರ್ಗದವರಿಗೆ ಸರ್ಕಾರ ಅನುಕೂಲ ಮಾಡಿದರೆ ಬಿಜೆಪಿಯವರು ಸುಳ್ಳುಗಳ ಮೂಲಕ ಗುಲ್ಲೆಬ್ಬಿಸಿ ಗೊಂದಲ ಸೃಷ್ಟಿಸುತ್ತಾರೆ. ಮಾಧ್ಯಮದವರು ಬಿಜೆಪಿಯವರ ಜತೆ ಸೇರಿ ಗೊಂದಲ ಹೆಚ್ಚಿಸಬಾರದು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಶಿಫಾರಸ್ಸಿನಂತೆ ಮೊನ್ನೆ ವಿದ್ಯುತ್ ದರ ಹೆಚ್ಚಳವಾಗಿದೆ. ಆದರೆ, ನಾವೇ ವಿದ್ಯುತ್ ದರ ಹೆಚ್ಚಿಸಿದೆವು ಎಂಬ ಸುಳ್ಳನ್ನು ಬಿಜೆಪಿ ಪರಿವಾರ ಹರಡಿಸುತ್ತಿದೆ ಎಂದು ಸಿಎಂ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಪರಿಷತ್ ಸದಸ್ಯ ನಾಗರಾಜ ಯಾದವ್, ಕಾಂಗ್ರೆಸ್ ಮುಖಂಡರಾದ ರೇವಣ್ಣ, ಯು.ಬಿ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

