ಬಾಲಕಾರ್ಮಿಕರ ನೇಮಕಾತಿ ಶಿಕ್ಷಾರ್ಹ ಅಪರಾಧ:ಸಿದ್ದರಾಮಯ್ಯ

ಬೆಂಗಳೂರು: ಬಾಲಕಾರ್ಮಿಕರ ನೇಮಕಾತಿ ಶಿಕ್ಷಾರ್ಹ ಅಪರಾಧವಾಗಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಅತ್ಯಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

ಸೋಮವಾರ ಬೆಂಗಳೂರಿನ ಎಂ.ಜಿ ರಸ್ತೆ ಮಹಾತ್ಮ ಗಾಂಧಿ ಪ್ರತಿಮೆ ಬಳಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.

ಬಾಲಕಾರ್ಮಿಕರ ನೇಮಕಾತಿ ಶಿಕ್ಷಾರ್ಹ ಅಪರಾಧ, ಈ ಕುರಿತು ಸಾರ್ವಜನಿಕರು ಪೋಷಕರು, ಉದ್ದಿಮೆದಾರರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು

ಮಕ್ಕಳನ್ನು ಯಾವುದೇ ಕಾರಣಕ್ಕೂ ಪೋಷಕರು ಕೆಲಸಗಳಿಗೆ ಕಳಿಸಬಾರದು ಅವರನ್ನು ಶಾಲೆಗೆ ಕಳುಹಿಸಿ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಪೋಷಕರಷ್ಟೇ ಅಲ್ಲ ಉದ್ಯಮದಾರರು ಕೂಡ ಈ ಬಗ್ಗೆ ಜಾಗೃತರಾಗಿರಬೇಕು, ಚಿಕ್ಕ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು. ಕಲಿಯುವ ವಯಸ್ಸಿನಲ್ಲಿ ಮಕ್ಕಳು ದುಡಿಮೆ ಮಾಡಿದರೆ ಅವರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ ಇದು ಸಾಮಾಜಿಕವಾಗಿ ದುರಂತವಾಗಿ ಬಿಡುತ್ತದೆ ಎಂದು ಹೇಳಿದರು.

ಎಲ್ಲರು ವಿದ್ಯ ಕಲಿಯಬೇಕು ಅದು ಅವರ ಮೂಲಭೂತ ಹಕ್ಕು ಎಂದು ಸಂವಿಧಾನ ಹೇಳಿದೆ, ಹಾಗಾಗಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು ತೆಗೆದುಕೊಂಡರೆ ಅಂತವರು ಶಿಕ್ಷೆಗೆ ಒಳಗಾಗುತ್ತಾರೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಒಂದು ವೇಳೆ ಉದ್ದಿಮೆದಾರರು 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಂಡರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಎಚ್ಚರಿಸಿದ್ದರು.

ಉದ್ಘಾಟನೆ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಕೈನಲ್ಲಿ ಬಿತ್ತಿ ಪತ್ರಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.