ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಜನರಿಗೆ ತಲಾ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಮೋಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ಅನ್ನ ಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡಲು ತಿರಸ್ಕರಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ ಇದು ಸರಿಯಲ್ಲ ಎಂದು ಹೇಳಿದರು.
ಕಾಂಗ್ರೆಸ್ ರೈತರಿಗೆ ಮತ್ತು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಆಗದೆ ಈಗ ತಪ್ಪಿಸಿಕೊಳ್ಳಲು ಏನೇನೋ ರಾಜಕಾರಣ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.
ಆಹಾರ ಭದ್ರತಾ ಕಾಯ್ದೆಡಿ ಎಲ್ಲರಿಗೂ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದೆ ಯಾವುದೇ ಖರ್ಚಿಲ್ಲದೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದೆ.
ಸತ್ಯ ಹೇಳಬೇಕೆಂದರೆ ರಾಜ್ಯ ಸರ್ಕಾರ 10 ಕೆಜಿ ಕೊಡಬೇಕು ಕೇಂದ್ರ ನೀಡುವ ಅಕ್ಕಿ ಸೇರಿ ರಾಜ್ಯ ಈಗ ಒಟ್ಟು 15 ಕೆಜಿ ಅಕ್ಕಿ ನೀಡಬೇಕಾಗುತ್ತದೆ.
ಆದರೆ ಕೇಂದ್ರ 5 ಕೆ.ಜಿ ರಾಜ್ಯದ 5 ಕೆಜಿ ಸೇರಿಸಿ ನಾವು 10 ಕೆಜಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ ಇದು ಯಾವ ನ್ಯಾಯ ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಇದೆ ವೇಳೆ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಬೊಮ್ಮಾಯಿ ಗರಮ್ಮಾದರು.
ಬಿಜೆಪಿಯ ಕೆಲ ಮಹಾನ್ ನಾಯಕರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂದು ಇತ್ತೀಚಿಗೆ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಸಿದ ಬೊಮ್ಮಾಯಿ ನಾನು ನನ್ನ ಜೀವನದಲ್ಲೇ ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ನನಗೆ ಹೊಂದಾಣಿಕೆ ರಾಜಕೀಯ ಅವಶ್ಯಕತೆಯೂ ಇಲ್ಲ ಸಿದ್ದರಾಮಯ್ಯ ಅವರ ವಿರುದ್ಧ 5 ಕೇಸು ದಾಖಲಿಸಿದ್ದೇವೆ ಅಲ್ಲದೆ 65 ಎಸಿಬಿ ಕೇಸುಗಳನ್ನು ಲೋಕಾಯುಕ್ತಕ್ಕೆ ನೀಡಿದ್ದೇವೆ ಎಂದು ಪ್ರತಾಪ್ ಸಿಂಹಗೆ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಸಂಸದ ಪಿ ಸಿ ಮೋಹನ್ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್ ರವಿ ಕುಮಾರ್ ಉಪಸಿತರಿದ್ದರು

