ಕೇಂದ್ರ ‌ಸರ್ಕಾರ‌ ಅಕ್ಕಿ ಕೊಡದಿರುವುದು ವಿರೋಧಿಸಿ ಜೂ 20 ಪ್ರತಿಭಟನೆ -ಡಿಕೆಶಿ

ಬೆಂಗಳೂರು: ಕೇಂದ್ರ ಸರ್ಕಾರ ಅಕ್ಕಿಕೊಡಲು ನಿರಾಕರಿಸಿರುವುದನ್ನು ವಿರೋಧಿಸಿ ಜೂನ್ 20 ಮಂಗಳವಾರದಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ತಪ್ಪನ್ನು ಜನರಿಗೆ ತಿಳಿಸಿಕೊಡಬೇಕು ಹಾಗೂ ನಮಗೆ ಬರಬೇಕಿರುವ ಅಕ್ಕಿಯನ್ನು ಕೊಡಬೇಕು ಎಂದು ಒತ್ತಾಯಿಸುವ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಒಕ್ಕೂಟದ ವ್ಯವಸ್ಥೆಯಲ್ಲಿ ಭಾರತೀಯ ಆಹಾರ ನಿಗಮದಿಂದ ಅಕ್ಕಿ ಖರೀದಿಸಲು ಎಲ್ಲ ರಾಜ್ಯಗಳಿಗೂ ಅವಕಾಶ ಇದೆ ಎಂದು ಹೇಳಿದರು.

ಆದರೆ ನಿಗಮದ ಪ್ರಾದೇಶಿಕ ಅಧಿಕಾರಿಗಳು ಜೂನ್ 12ರಂದು ರಾಜ್ಯಕ್ಕೆ ಅಗತ್ಯವಾಗಿರುವ 2.85 ಲಕ್ಷ ಮೆಟ್ರಿಟನ್ ಅಕ್ಕಿ ನೀಡುವುದಾಗಿ ಲಿಖಿತ ಭರವಸೆ ನೀಡಿದ್ದರು ಎಂದು ತಿಳಿಸಿದರು.

ಏಳು ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನಿದೆ ಎಂದು ಕೂಡ ತಿಳಿಸಿದ್ದರು ಆದರೆ ಮರುದಿನವೇ ಮತ್ತೊಂದು ಪತ್ರ ಬರೆದು ಅಕ್ಕಿ ನೀಡುವ ಪ್ರಸ್ತಾವನೆಯನ್ನು ಕೈಬಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ ಇದು ಎಷ್ಟು ಸರಿ ಎಂದು ಡಿ.ಕೆ ಶಿವಕುಮಾರ್ ಕಾರವಾಗಿ ಪ್ರಶ್ನಿಸಿದರು.

ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಬಹುದು ಆದರೆ ಪಾರದರ್ಶಕತೆ ಪಾಲನೆ ಮಾಡುವ ಉದ್ದೇಶದಿಂದ ಲಭ್ಯವಿರುವ ವ್ಯವಸ್ಥೆಯಲ್ಲಿ ಅಕ್ಕಿ ಖರೀದಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

ಕರ್ನಾಟಕವು ಆದಾಯ ತೆರಿಗೆ ಜಿಎಸ್‌ಟಿ ಸೇರಿದಂತೆ ಕೇಂದ್ರಕ್ಕೆ ಶೇಕಡ 30 ರಿಂದ 40 ರಷ್ಟು ಆದಾಯದ ಮೂಲವಾಗಿದೆ ಆದರೆ ಕರ್ನಾಟಕಕ್ಕೆ ಮರಳಿ ದೊರೆಯುತ್ತಿರುವ ಪಾಲು ಶೇಕಡ 15 ರಿಂದ 17 ರಷ್ಟು ಮಾತ್ರ ಇದು ತಾರತಮ್ಯ, ಹಾಗಾಗಿ ಇದರ ವಿರುದ್ಧ ವಿರೋಧ ವ್ಯಕ್ತಪಡಿಸಲೇಬೇಕಿದೆ ಎಂದು ತಿಳಿಸಿದರು.

ನಮ್ಮ ರಾಜ್ಯಕ್ಕೆ ಅಗತ್ಯ ಅಕ್ಕಿ ಸೇರಿದಂತೆ ಇತರೆ ನೆರವು ಕೊಡಿಸಲು ನಮ್ಮ ರಾಜ್ಯದ 25 ಮಂದಿ ಸಂಸದರು ಮತ್ತು ಎಂಟು ಮಂದಿ ಕೇಂದ್ರ ಸಚಿವರು ನಮಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಜೊತೆಗೆ ನಾನು ಅವರಿಗೆ ಮನವಿ ಕೂಡ ಮಾಡುತ್ತೇನೆ ಎಂದು ಪ್ರಶ್ನೆಯೊಂದಿಗೆ ಡಿ.ಕೆ ಶಿವಕುಮಾರ್ ಉತ್ತರಿಸಿದರು.

ಇದು ರಾಜ್ಯದ ಅಭಿವೃದ್ಧಿ ವಿಷಯ, ಹಾಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಮನವಿ ಮಾಡುತ್ತೇನೆ ಅದಕ್ಕೆ ಅವರು ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಇದೆ ವೇಳೆ ಡಿ.ಕೆ ಶಿವಕುಮಾರ್ ತಿಳಿಸಿದರು.